ಆಸ್ಪತ್ರೆಗೆ ಬರುವ ಮಹಿಳೆಯರ ಅರೆನಗ್ನ ಫೋಟೋ ಕ್ಲಿಕ್ಕಿಸುತ್ತಿದ್ದವನ ಬಂಧನ

ಬೆಂಗಳೂರು, ಡಿ. 2: ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುತ್ತಿದ್ದ ಮಹಿಳೆಯರ ಅರೆನಗ್ನ ಚಿತ್ರ ಸೆರೆಹಿಡಿಯುತ್ತಿದ್ದ ಆರೋಪದ ಮೇಲೆ ಆಸ್ಪತ್ರೆಯ ನೌಕರರನ್ನು ಇಲ್ಲಿನ ಕೆಆರ್ ಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಡಿ.ರಘು ಎಂದು ಗುರುತಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಮೂಲದ ಆರೋಪಿ ಮೂರು ವರ್ಷದಿಂದ ಕೆಆರ್ ಪುರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ ಪತ್ನಿ ಇಬ್ಬರು ಮಕ್ಕಳಿದ್ದಾರೆ. ಆದರೂ, ಈತ ಮಹಿಳೆಯರ ಅರೆನಗ್ನ ಚಿತ್ರ ತೆಗೆಯುವ ವಿಕೃತ ಮನಸ್ಸಿನವನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕಿತ್ಸೆಗೆ ಬರುವ ಮಹಿಳೆಯರ ಅರೆನಗ್ನ ಚಿತ್ರಗಳನ್ನು ತೆಗೆದು ತನ್ನ ಗೆಳೆಯರಿಗೆ ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಹಂಚಿಕೊಳ್ಳುವ ಮನೋಭಾವ ಹೊಂದಿದ್ದ. ನ.30ರಂದು ಕೆಆರ್ ಪುರ ಸರಕಾರಿ ಆಸ್ಪತ್ರೆಗೆ ಎದೆನೋವಿನ ಕಾರಣಕ್ಕೆ ಆಗಮಿಸಿದ್ದ ಮಹಿಳೆ ಇಸಿಜಿ ಮಾಡಿಸುವ ವೇಳೆ ಪರದೆಯ ಹಿಂದೆ ನಿಂತು ಮಹಿಳೆಯ ಅರೆನಗ್ನ ಚಿತ್ರವನ್ನು ಸೆರೆಹಿಡಿದಿದ್ದ ಎಂದು ಹೇಳಲಾಗಿದೆ.
ಇದನ್ನು ಅರಿತ ಮಹಿಳೆ ತಕ್ಷಣವೇ ಆತನ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಪರಿಶೀಲಿಸಿದ್ದು, ಅದರಲ್ಲಿ ಕೇವಲ ಆಕೆಯ ಫೋಟೋಗಳು ಇರಲಿಲ್ಲ. ಬದಲಾಗಿ ಬೇರೆ ಮಹಿಳೆಯ ಅರೆನಗ್ನ ಚಿತ್ರಗಳು ಪತ್ತೆಯಾಗಿದ್ದವು. ಆ ಮಹಿಳೆ ಆಸ್ಪತ್ರೆಯ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಳು.
ಹೀಗಾಗಿ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಿದ ಆಸ್ಪತ್ರೆಯ ಮೇಲಧಿಕಾರಿಗಳು ಪ್ರಕರಣವನ್ನು ಅಲ್ಲಿಗೆ ಕೈಬಿಡುವ ಪ್ರಯತ್ನ ನಡೆಸಿದ್ದರು. ಆದರೆ, ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದ್ದರಿಂದ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡ ಕೆಆರ್ ಪುರ ಪೊಲೀಸರು, ಆರೋಪಿ ರಘುನನ್ನು ವಶಕ್ಕೆ ಪಡೆದಿದ್ದು, ವಿಚಾರಣೆಯ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಆರೋಪಿಗೆ ಈ ರೀತಿಯ ಹವ್ಯಾಸ ಬಹಳ ಹಿಂದಿನಿಂದಲೂ ಇದೆ. ಆತನ ಮೊಬೈಲ್‌ನಲ್ಲಿ ಸಾಕಷ್ಟು ಅಶ್ಲೀಲ ಚಿತ್ರಗಳಿದ್ದು, ಆಸ್ಪತ್ರೆಗೆ ಬಂದಿದ್ದ ರೋಗಿಗಳು ಅರೆನಗ್ನ ಚಿತ್ರಗಳು ಇರುವುದನ್ನು ಗಮನಿಸಿದ್ದೇವೆ. ಮೊಬೈಲ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೆಆರ್ ಪುರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
‘ಮಹಿಳಾ ರೋಗಿಗಳ ಅರೆನಗ್ನ ಚಿತ್ರ ತೆಗೆಯುತ್ತಿದ್ದ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮೊಬೈಲ್ ವಶಕ್ಕೆ ಪಡೆದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು ತನಿಖೆ ಮುಂದುವರಿಸಲಾಗಿದೆ’
-ಅಬ್ದುಲ್ ಅಹದ್, ವೈಟ್‌ಫೀಲ್ಡ್ ವಿಭಾಗದ ಡಿಸಿಪಿ







