ಶಿವಮೊಗ್ಗ : ಸಂಭ್ರಮದ ಮೀಲಾದುನ್ನೆಬಿ ಆಚರಣೆ

ಶಿವಮೊಗ್ಗ, ಡಿ. 2: ಶಿವಮೊಗ್ಗ ನಗರದಲ್ಲಿ ಶನಿವಾರ ಮುಸ್ಲಿಮರು ಪ್ರವಾದಿ ಮುಹಮ್ಮದ್ ಪೈಗಂಬರ್‍ರವರ ಜನ್ಮದಿನ 'ಮೀಲಾದುನ್ನೆಬಿ' ಆಚರಣೆಯನ್ನು ಅತ್ಯಂತ ಸಡಗರ - ಸಂಭ್ರಮ, ಶ್ರದ್ದಾಭಕ್ತಿಯಿಂದ ಆಚರಿಸಿದರು. ಹಬ್ಬದ ಅಂಗವಾಗಿ ನಡೆದ ಭವ್ಯ ಮೆರವಣಿಗೆಯು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ವಯೋಬೇಧವಿಲ್ಲದೆ ಸಾವಿರಾರು ಜನ ಭಾಗವಹಿಸಿದ್ದರು.
ವಿಶೇಷ ಕಾರ್ಯಕ್ರಮ: ನಗರದ ಮಸೀದಿಗಳಲ್ಲಿ ಶುಕ್ರವಾರ ರಾತ್ರಿ ವಿಶೇಷ ಧಾರ್ಮಿಕ ಕಾರ್ಯಕ್ರಮ, ಪ್ರವಚನಗಳು ನಡೆದವು. ಶನಿವಾರ ಕೂಡ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಕೆಲ ಮುಸ್ಲಿಂ ಸಂಘಸಂಸ್ಥೆಗಳು ವಿವಿಧೆಡೆ ಸಾರ್ವಜನಿಕರಿಗೆ ಸಿಹಿ ತಿಂಡಿ, ಹಣ್ಣು ಹಂಪಲು ವಿತರಣೆ, ಅನ್ನದಾಸೋಹ ಆಯೋಜಿಸುವ ಮೂಲಕ ಹಬ್ಬ ಆಚರಣೆ ಮಾಡಿದವು.
ಮೆರವಣಿಗೆ: ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಗಾಂಧಿಬಜಾರ್ ಜಾಮೀಯಾ ಮಸೀದಿ ಆವರಣದಿಂದ ಮಧ್ಯಾಹ್ನ ಸುಮಾರು 2.30 ಗಂಟೆಗೆ ಆರಂಭವಾದ ಮೆರವಣಿಗೆಯು ಸಂಜೆ 7.30 ರ ಸುಮಾರಿಗೆ ಅಂತ್ಯಗೊಂಡಿತು. ಲಷ್ಕರ್‍ಮೊಹಲ್ಲಾ, ಕೋಟೆ ರಸ್ತೆ, ಸೈನ್ಸ್ ಮೈದಾನ, ಟ್ಯಾಂಕ್ ಮೊಹಲ್ಲಾ, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತ, ಗೋಪಿ ವೃತ್ತ, ನೆಹರೂ ರಸ್ತೆ, ಅಮೀರ್ ಅಹಮದ್ ವೃತ್ತ, ಕೆ.ಆರ್.ಪುರಂ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆ - ವೃತ್ತಗಳಲ್ಲಿ ಮೆರವಣಿಗೆ ಸಾಗಿತು.
ಮೆರವಣಿಗೆ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ನಗರದ ಕೆಲ ವೃತ್ತ, ರಸ್ತೆಗಳನ್ನು ಹಸಿರು ಧ್ವಜ, ಬಂಟಿಂಗ್ಸ್‍ಗಳಿಂದ ಸಿಂಗರಿಸಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ಮಜ್ಜಿಗೆ, ಹಾಲು, ತಂಪು ಪಾನೀಯ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಸಂಘಸಂಸ್ಥೆಗಳು ವಿತರಣೆ ಮಾಡಿದವು.
ಮೆರವಣಿಗೆಯಲ್ಲಿ ಪವಿತ್ರ ಯಾತ್ರಾ ಸ್ಥಳಗಳಾದ ಮಕ್ಕಾ-ಮದೀನ ಮಸೀದಿ, ಮಿನಾರ್‍ಗಳ ಪ್ರತಿಕೃತಿಗಳನ್ನು ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಇವುಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕೆಲವರು ತಮ್ಮ ಮಕ್ಕಳನ್ನು ಆಕರ್ಷಕ ವೇಷಭೂಷಣಗಳಿಂದ ತೊಡಿಸಿ ಕರೆತಂದಿದ್ದರು. ಈ ಪುಟಾಣಿಗಳು ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದರು.
ಮೆರವಣಿಗೆಯಲ್ಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಸೂಡಾಧ್ಯಕ್ಷ ಇಸ್ಮಾಯಿಲ್ ಖಾನ್, ಜೆಡಿಎಸ್ ಪಕ್ಷದ ಮಹಮ್ಮದ್ ಯೂಸೂಫ್ ಭಯ್ಯಾ, ಹೆವನ್ ಹಬೀಬ್, ಕಾಂಗ್ರೆಸ್ ಮುಖಂಡ ಆಫ್ತಾಬ್ ಪರ್ವೀಜ್, ಶಾಮೀರ್ ಖಾನ್, ಮಹಮ್ಮದ್ ಸಾದತ್‍ವುಲ್ಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಿಗಿ ಭದ್ರತೆ: ಮೀಲಾದುನ್ನೆಬಿ ಅಂಗವಾಗಿ ನಗರಾದ್ಯಂತ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಪಹರೆ ಹಾಕಲಾಗಿತ್ತು. ಗಸ್ತು ವ್ಯವಸ್ಥೆ ಹೆಚ್ಚಿಸಲಾಗಿತ್ತು. ಮೆರವಣಿಗೆಯ ಬಂದೋಬಸ್ತ್ ಕಾರ್ಯಕ್ಕೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.







