ಕೇರಳದ ಮೀನುಗಾರರನ್ನು ಜಪಾನಿ ನೌಕೆ ರಕ್ಷಿಸಿದ ಸುದ್ದಿ ಸುಳ್ಳು: ಪಿಣರಾಯಿ ವಿಜಯನ್
“ಇಂತಹ ವದಂತಿ ಹರಡುವವರು ಹುಚ್ಚರು”

ತಿರುವನಂತಪುರ,ಡಿ.2: ಆಳಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಕೇರಳದ 60 ಮೀನುಗಾರರನ್ನು ಜಪಾನಿನ ವಾಣಿಜ್ಯ ನೌಕೆಯೊಂದು ರಕ್ಷಿಸಿದೆ ಎಂಬ ವರದಿಗಳು ಸುಳ್ಳು ಎನ್ನುವುದು ಬೆಳಕಿಗೆ ಬಂದಿದೆ. ಈ ವದಂತಿ ಸೃಷ್ಟಿಸಿದವರನ್ನು ಶನಿವಾರ ತರಾಟೆಗೆತ್ತಿಕೊಂಡ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಇಂತಹ ವದಂತಿಗಳನ್ನು ಹರಡುತ್ತಿರುವವರು ಹುಚ್ಚರು ಎಂದು ಬಣ್ಣಿಸಿದರು.
ಒಖಿ ಚಂಡಮಾರುತವು ಕೇರಳದ ಕರಾವಳಿಯನ್ನು ಅಪ್ಪಳಿಸಿದ ಬಳಿಕ 60 ಮೀನುಗಾರರನ್ನು ಜಪಾನಿನ ನೌಕೆಯೊಂದು ರಕ್ಷಿಸಿದ್ದಕ್ಕಾಗಿ ತಾನು ಆ ರಾಷ್ಟ್ರದ ಸರಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಲು ಬಯಸಿರುವುದಾಗಿ ತಿರುವನಂತಪುರ ಜಿಲ್ಲಾಧಿಕಾರಿ ಎಸ್.ವಾಸುಕಿ ಅವರು ಶುಕ್ರವಾರ ಸಂಜೆ ಮಾಧ್ಯಮಗಳಿಗೆ ತಿಳಿಸಿದ್ದರು. ರಕ್ಷಿಸಲ್ಪಟ್ಟ ಮೀನುಗಾರರು ವಿಝಿಂಜಂ ಕಡಲತೀರಕ್ಕೆ ಆಗಮಿಸಲಿದ್ದಾರೆ ಎಂದೂ ಅವರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ನಾಪತ್ತೆಯಾಗಿದ್ದ ತಮ್ಮ ಸಹೋದ್ಯೋಗಿಗಳನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಮೀನುಗಾರರು ಕಡಲತಡಿಯಲ್ಲಿ ಸೇರಿದ್ದರು. ಬಂದರಿನಲ್ಲಿ ಹಲವಾರು ಆ್ಯಂಬುಲೆನ್ಸ್‌ಗಳನ್ನು ಸಿದ್ಧವಾಗಿರಿಸುವಂತೆಯೂ ಸೂಚಿಸಲಾಗಿತ್ತು. ಜಪಾನಿ ನೌಕೆ ಕೊಚ್ಚಿಗೆ ಪ್ರಯಾಣಿಸುತ್ತಿರುವುದರಿಂದ ಮೀನುಗಾರರನ್ನು ಅಲ್ಲಿಯೇ ಇಳಿಸಲಿದೆ ಎಂಬ ಹೊಸಸುದ್ದಿ ಯೊಂದು ಬಳಿಕ ಬಂದಿತ್ತು.
ತಡರಾತ್ರಿಯಲ್ಲಷ್ಟೇ ಇದೊಂದು ಸುಳ್ಳುಸುದ್ದಿ ಎನ್ನುವುದು ಬಹಿರಂಗಗೊಂಡಿತ್ತು.
ಕೆಲವು ಜನರು ಹುಚ್ಚರಾಗಿದ್ದು, ಕೆಟ್ಟ ಸಂದರ್ಭಗಳಲ್ಲಿ ಇಂತಹ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ ವಿಜಯನ್, ಈವರೆಗೆ ಸುಮಾರು 400 ಮೀನುಗಾರರನ್ನು ರಕ್ಷಿಸಲಾಗಿದ್ದು, ಸುಮಾರು 100 ಜನರನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ ಎಂದು ತಿಳಿಸಿದರು.
ನಾಪತ್ತೆಯಾಗಿರುವ ಕೇರಳದ 102 ಮೀನುಗಾರರನ್ನು ಪತ್ತೆ ಹಚ್ಚಲು ಭಾರತೀಯ ನೌಕಾಪಡೆ, ವಾಯುಪಡೆ ಮತ್ತು ತಟರಕ್ಷಣಾ ಪಡೆಗಳು ಶ್ರಮಿಸುತ್ತಿವೆ.







