ಡಿ.9 ರಂದು 'ನಮ್ಮ ಕಾಂಗ್ರೆಸ್' ಪಕ್ಷಕ್ಕೆ ಚಾಲನೆ:ವರ್ತೂರು ಪ್ರಕಾಶ್

ಮಂಡ್ಯ, ಡಿ.2: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಡಿ.9 ರಂದು ಕೂಡಲಸಂಗಮದಲ್ಲಿ ಚಾಲನೆ ದೊರೆಯಲಿದೆ ಎಂದು ಶಾಸಕ ವರ್ತೂರು ಪ್ರಕಾಶ್ ತಿಳಿಸಿದ್ದಾರೆ.
ಮಳವಳ್ಳಿಯ ಹೊರವಲಯದ ಕಣಿಗಲ್ ಬೊಮ್ಮದೇವರ ಸಮುದಾಯ ಭವನದಲ್ಲಿ ಶನಿವಾರ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಸಾವಿರಾರು ಬೆಂಬಲಿಗರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮುದಾಯವನ್ನು ಕಡೆಗಣಿಸಿದ್ದು, ಸಮುದಾಯದ ಅಭಿವೃದ್ದಿಗಾಗಿ ನಮ್ಮ ಕಾಂಗ್ರೆಸ್ ಪಕ್ಷವನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ. ಜಾತ್ಯತೀತವಾಗಿ ಪಕ್ಷವನ್ನು ಕಟ್ಟಲು ಪ್ರತಿಯೊಬ್ಬರು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.
ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಲೇಬೇಕೆಂದು ಕಳೆದ ಚುನಾವಣೆಯಲ್ಲಿ ಇಡಿ ರಾಜ್ಯದ ಕುರುಬರೆಲ್ಲರೂ ಒಗ್ಗೂಡಿ ಸಂಘಟಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಾಗಿತ್ತು. ಆದರೆ, ಮುಖ್ಯಮಂತ್ರಿಯಾದ ನಂತರ ತನ್ನ ಸಮುದಾಯವನ್ನೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಅವರು ಆಪಾದಿಸಿದರು.
ಸಭೆಯಲ್ಲಿ ಅಗಸನಪುರ ಗ್ರಾಪಂ ಅಧ್ಯಕ್ಷ ಶಿವಕುಮಾರ್, ಅರುಣ್, ಮಾಲತೀಶ್, ಭರತ್, ಸೇರಿದಂತೆ ಇನ್ನೂರಕ್ಕೂ ಹೆಚ್ಚು ಅಭಿಮಾನಿಗಳ ಭಾಗವಹಿಸಿದ್ದರು.







