ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲಿಸಲು ಜನ ತೀರ್ಮಾನಿಸಿದ್ದಾರೆ : ಎಂ.ಶ್ರೀನಿವಾಸ್ ವಿಶ್ವಾಸ

ಮಂಡ್ಯ, ಡಿ.2: ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಬೇಸತ್ತಿರುವ ಜನರು ಮುಂಬರುವ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜಾ.ದಳವನ್ನು ಬೆಂಬಲಿಸಲು ತೀರ್ಮಾಸಿದ್ದಾರೆ ಎಂದು ಮಾಜಿ ಶಾಸಕ ಎಂ.ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ಸಂಜೆ ನಗರ ಜೆಡಿಎಸ್ ಯುವ ಪದಾಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕೆಂದು ರಾಜ್ಯಾದ್ಯಂತ ಕೂಗು ಕೇಳಿ ಬರುತ್ತಿದೆ ಎಂದರು.
ಪಕ್ಷವನ್ನು ಮತ್ತಷ್ಟು ಸಂಘಟನೆ ಮಾಡುವ ನಿಟ್ಟಿನಲ್ಲಿ ಯುವ ಕಾರ್ಯಕರ್ತರು ದಿನಕ್ಕೆ ಒಂದು ಗಂಟೆಯಾದರೂ ತಮ್ಮ ವಾರ್ಡುಗಳಲ್ಲಿ ಪಕ್ಷ ಸಂಘಟನೆಗೆ ಮುಂದಾಗಬೇಕು. ಈ ತಿಂಗಳ ಕೊನೆಯಲ್ಲಿ ನಗರದಲ್ಲಿ ಯುವ ಸಮಾವೇಶ ನಡೆಸಲಾಗುವುದು ಎಂದು ಅವರು ಹೇಳಿದರು.
ಮಂಡ್ಯ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕರು ನಾಲ್ಕು ವರ್ಷಗಳಿಂದ ಕೇವಲ ನಾಲ್ಕು ಬಾರಿ ಮಾತ್ರ ವಿಧಾನಸಭಾ ಅಧಿವೇಶನಕ್ಕೆ ಹೋಗಿರಬಹುದು. ನಮ್ಮ ಸರಕಾರದ ಅವಧಿಯಲ್ಲಿನ ಕಾಮಗಾರಿಗೆ ಉದ್ಘಾಟನೆ ಹೊರತುಪಡಿಸಿ ಹೊಸದಾಗಿ ಯಾವುದೇ ಕೆಲಸವಾಗಿಲ್ಲ ಎಂದು ಪರೋಕ್ಷವಾಗಿ ಅಂಬರೀಶ್ ಅವರನ್ನು ಟೀಕಿಸಿದರು.
ಜಿ.ಪಂ. ಸದಸ್ಯ ಎನ್. ಶಿವಣ್ಣ ಮಾತನಾಡಿ, ರಾಜಕೀಯದಲ್ಲಿ ಇಚ್ಚಾಶಕ್ತಿ ಇರುವಂತಹ ನಾಯಕರನ್ನು ಆಯ್ಕೆ ಮಾಡಬೇಕು. ಆಗ ಪ್ರಜೆಗಳ ರಕ್ಷಣೆಯಾಗುತ್ತದೆ. ಕುಮಾರಸ್ವಾಮಿ ನೇತೃತ್ವದ ಸರಕಾರ ಬರಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಮುಖಂಡ ಡಾ. ಕೃಷ್ಣ ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಯುವಕರೇ ನಮ್ಮ ಪಕ್ಷದ ನಿಜವಾದ ಕಾರ್ಯಕರ್ತರು. ಅವರೆಲ್ಲಾ ಸ್ವಾಭಿಮಾನಿಗಳಾಗಬೇಕು. ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎನ್.ಯೋಗೇಶ್, ಮಾಜಿ ಸದಸ್ಯ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ತಾಲೂಕು ಜಾ.ದಳ ಅಧ್ಯಕ್ಷ ಎಂ.ಜಿ. ತಿಮ್ಮೇಗೌಡ, ನಗರ ಘಟಕದ ಅಧ್ಯಕ್ಷ ರವಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಶಿಧರ್, ಮಹಿಳಾ ಘಟಕದ ಅಧ್ಯಕ್ಷೆ ಜಯಶೀಲಮ್ಮ, ಆರ್.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಸ್ವಾಮಿ, ಇತರರಿದ್ದರು.







