ಚಂಡಮಾರುತಕ್ಕೆ ಸಿಲುಕಿ ಇನ್ನೊಂದು ಹಡಗು ನಾಪತ್ತೆ: ಅಪಾಯದಲ್ಲಿ 8 ಸಿಬ್ಬಂದಿ
ಮಂಗಳೂರು, ಡಿ. 2: ಓಖಿ ಚಂಡಮಾರುತ ಪ್ರಭಾವ ಲಕ್ಷದ್ವೀಪದಲ್ಲಿ ಮುಂದುವರಿದಿರುವುದರಿಂದ ಮಂಗಳೂರು ಹಳೆ ಬಂದರಿನಿಂದ ಹೊರಟಿದ್ದ ಎರಡು ಸಣ್ಣ ಹಡಗುಗಳು ಪೂರ್ಣ ಮುಳುಗಡೆಯಾಗಿದೆ. ಈ ಎರಡೂ ಹಡಗುಗಳಲ್ಲಿದ್ದ 15 ಮಂದಿಯನ್ನು ರಕ್ಷಿಸಲಾಗಿದೆ. ಈ ನಡುವೆ ಇನ್ನೊಂದು ಸರಕು ತುಂಬಿದ ಸಣ್ಣ ಹಡಗು ಸಮುದ್ರ ಮಧ್ಯೆ ಸಿಲುಕಿಕೊಂಡಿದ್ದು, ಇದರಲ್ಲಿರುವ ಎಂಟು ಮಂದಿ ಸಿಬ್ಬಂದಿ ಅಪಾಯದಲ್ಲಿದ್ದಾರೆ ಎಂದು ಹೇಳಲಾಗಿದೆ.
ನಾಪತ್ತೆಯಾಗಿರುವ ಜೇವಾಹ್ ಎಂಬ ಹೆಸರಿನ ಈ ಸಣ್ಣ ಹಡಗು ಮಂಗಳೂರಿನಿಂದ ತೆರಳಿತ್ತು. ಲಕ್ಷದ್ವೀಪದ ಅಗಟ್ಟಿ ದ್ವೀಪದಿಂದ 40 ನಾಟಿಕಲ್ ಮೈಲ್ ದೂರದಲ್ಲಿದ್ದು, ಹಡಗಿನ ಎಂಜಿನ್ ನಿಷ್ಕ್ರಿಯಗೊಂಡಿದೆ. ಸಮುದ್ರ ಮಧ್ಯೆ ಬೀಸುತ್ತಿರುವ ಚಂಡಮಾರುತದಿಂದಾಗಿ ಈ ಸರಕು ತುಂಬಿದ ಹಡಗು ಗಾಳಿ ಬಂದತ್ತ ಸಾಗುತ್ತಿದೆ ಎಂದು ಹೇಳಲಾಗಿದೆ.
ಹಡಗಿನಲ್ಲಿ 8 ಮಂದಿ ಸಿಬ್ಬಂದಿಗಳು ಇದ್ದು, ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.‘‘ಶನಿವಾರ ಮುಂಜಾವಿನ 3 ಗಂಟೆಯವರೆಗೂ ನಾವು ಹಡಗಿನ ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿದ್ದೆವು. ಆದರೆ, ಮುಂಜಾವ ಮೂರು ಗಂಟೆಯ ಬಳಿದ ಅದರಲ್ಲಿರುವ ಯಾವ ಸಿಬ್ಬಂದಿಯೂ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರನ್ನು ರಕ್ಷಿಸುವ ಎಲ್ಲ ಪ್ರತ್ನಗಳನ್ನು ಮಾಡಿದ್ದೇವೆ. ಆದರೆ, ಇದೀಗ ಅವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಲಕ್ಷದ್ವೀಪದ ಆಡಳಿತಾಧಿಕಾರಿ ಫಾರೂಖ್ ಖಾನ್ ತಿಳಿಸಿದ್ದಾರೆ.
ನಾಪತ್ತೆಯಾಗಿರುವ ಹಡಗು ಎಲ್ಲಿಂದ ಯಾವ ಕಡೆಗೆ ತೆರಳುತ್ತಿತ್ತು ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಇದು ನಮ್ಮ ವ್ಯಾಪ್ತಿಗೆ ಬರದಿದ್ದರೂ ಮಾನವೀಯ ನೆಲೆಯಲ್ಲಿ ಮಾಹಿತಿಗಳನ್ನು ಪಡೆದು ರಕ್ಷಿಸುವ ಪ್ರಯತ್ನವನ್ನು ಮಾಡಿದ್ದೇವೆ. ಹಡಗಿನ ಎಂಜಿನ್‌ನ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದ್ದು, ಹಡಗು ಗಾಳಿ ಬೀಸುವತ್ತ ಸಾಗುತ್ತಿದೆ. ಇದೀಗ ಸಮುದ್ರ ಮಧ್ಯೆ ಸಿಲುಕಿರುವ ಈ ಹಡಗು ಎಲ್ಲಿ, ಯಾವ ಸ್ಥಿತಿಯಲ್ಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದವರು ತಿಳಿಸಿದ್ದಾರೆ.







