ನೋಟು ರದ್ದತಿ ಲೋಕಜ್ಞಾನವಿಲ್ಲದ ಅವಾಸ್ತವಿಕ ನಿರ್ಧಾರ: ಮನಮೋಹನ್ ಸಿಂಗ್ ಟೀಕೆ

ಹೊಸದಿಲ್ಲಿ, ಡಿ. 2: ಕೇಂದ್ರ ಸರಕಾರದ ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿ ನಿರ್ಧಾರದ ಬಗ್ಗೆ ಟೀಕಾಪ್ರಹಾರ ಮುಂದುವರಿಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಇದು ಲೋಕಜ್ಞಾನವಿಲ್ಲದೆ ತರಾತುರಿಯಿಂದ ಅನುಷ್ಠಾನಗೊಳಿಸಿದ ಅವಾಸ್ತವಿಕ ಕ್ರಮವಾಗಿದೆ ಎಂದು ಹೇಳಿದ್ದಾರೆ.
ನೋಟು ನಿಷೇಧವು ಕಾಳಧನದ ವಿರುದ್ಧ ಕೈಗೊಂಡ ಲೋಕಜ್ಞಾನವಿಲ್ಲದ ಅವಾಸ್ತವಿಕ ನಿರ್ಧಾರವಾಗಿದೆ. ಇಲ್ಲಿ ಮೋದಿ ಎಲ್ಲರನ್ನೂ ಕಳ್ಳರಂತೆ ಬಿಂಬಿಸಿದರು. ಆದರೆ ನಿಜವಾದ ಅಪರಾಧಿಗಳು ಸುಲಭದಲ್ಲಿ ಪಾರಾದರು ಎಂದರು. ಜಿಎಸ್‌ಟಿ ಕಾಯ್ದೆ ‘ಕೆಟ್ಟದಾಗಿ ರೂಪಿಸಲಾದ ಆತುರದಿಂದ ಜಾರಿಗೊಳಿಸಲಾದ ’ ಕಾಯ್ದೆ ಎಂದು ಮನಮೋಹನ್ ಬಣ್ಣಿಸಿದರು.
ನೋಟು ರದ್ದತಿ ಮತ್ತು ಜಿಎಸ್‌ಟಿಯು ಉದ್ದಿಮೆ ವಲಯದಲ್ಲಿ ತೆರಿಗೆ ಭಯೋತ್ಪಾದನೆ ಯ ಬೆದರಿಕೆ ಹುಟ್ಟುಹಾಕಿದೆ. ಎಲ್ಲರನ್ನೂ ಕಳ್ಳರೆಂದು ಭಾವಿಸುವುದು ರಾಷ್ಟ್ರವಿರೋಧಿಯಾಗಿದ್ದು ರಾಜಕೀಯ ಪ್ರಕ್ರಿಯೆಗೆ ಹಾನಿ ಎಸಗುತ್ತದೆ. ರಾಜಕೀಯ ಮುಖಂಡರು ಉನ್ನತ ಆದರ್ಶದ ಪಾಲಕರಾಗಿರಬೇಕು ಎಂದ ಮನಮೋಹನ್, ನೋಟು ರದ್ದತಿಯ ಏಟಿನಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಜಿಎಸ್‌ಟಿ ಎಂಬ ಮಾರಣಾಂತಿಕ ಹೊಡೆತ ಬಿತ್ತು. ಸರಕಾರದ ಯಾರೊಬ್ಬರೂ ಉದ್ಯಮಿಗಳ, ವ್ಯಾಪಾರಿಗಳ ಕಷ್ಟನಷ್ಟದ ಬಗ್ಗೆ ಸೊಲ್ಲೆತ್ತಲಿಲ್ಲ. ತಾನು ಗುಜರಾತ್ ಮೂಲದವನಾಗಿದ್ದು ಗುಜರಾತ್ ಜನತೆಯ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಿದ್ದೇನೆ ಎಂದು ಹೇಳುತ್ತಿರುವ ಪ್ರಧಾನಿ ಮೋದಿ, ಗುಜರಾತ್‌ನ ಉದ್ಯಮಿಗಳ ನೋವನ್ನು ಯಾಕೆ ಅರ್ಥಮಾಡಿಕೊಂಡಿಲ್ಲ ಎಂದು ಮನಮೋಹನ್ ಪ್ರಶ್ನಿಸಿದರು. ಪ್ರಧಾನಿಯವರಲ್ಲಿ ಮತ್ತು ಅವರ ‘ಅಚ್ಛೇ ದಿನ್’ ಭರವಸೆಯಲ್ಲಿ ತಾವಿಟ್ಟ ನಂಬಿಕೆ ಹುಸಿಯಾಗಿದೆ ಎಂದು ಜನತೆಗೆ ಈಗ ಅನಿಸುತ್ತಿದೆ ಎಂದು ಮನಮೋಹನ್ ಹೇಳಿದರು.
2017-18ರ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ.5.7ಕ್ಕೆ ಕುಸಿದಿದೆ ಎಂಬ ವರದಿಯು ಅಸಂಘಟಿತ ಕ್ಷೇತ್ರದಲ್ಲಿ ಆಗಿರುವ ನಷ್ಟವನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಜಿಡಿಪಿಯಲ್ಲಿ ಕೇವಲ ಒಂದು ಶೇಕಡಾ ಕುಸಿತವಾದರೂ ಅದರಿಂದ ದೇಶಕ್ಕೆ ವಾರ್ಷಿಕವಾಗಿ 1.5 ಲಕ್ಷ ಕೋಟಿ ನಷ್ಟವಾಗುತ್ತದೆ. ಈ ನಷ್ಟದ ಪ್ರಭಾವ ಉದ್ಯೋಗಾವಕಾಶದ ಕುಸಿತಕ್ಕೆ ಮೂಲಕಾರಣ ಎಂದು ಮನಮೋಹನ್ ಹೇಳಿದರು.







