ಓಖಿ ಚಂಡಮಾರುತ ಹಿನ್ನೆಲೆ: ತೀರ ನಿವಾಸಿಗಳ ಮನೆ ತೆರವು

ಉಡುಪಿ, ಡಿ.2: ಒಖಿ ಚಂಡಮಾರುತದ ಪ್ರಭಾವ ಶನಿವಾರ ರಾತ್ರಿ ದ.ಕ. ಮತ್ತು ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲಿ ಕಂಡುಬರುತ್ತಿದ್ದು, ಸಮುದ್ರದ ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇದರಿಂದ ತೀರ ನಿವಾಸಿಗಳು ಆತಂಕಿತರಾಗಿದ್ದಾರೆ. ಕಾಪುವಿನ ಸಮುದ್ರದ ತೀರದ ಮೂರು ಮನೆಗಳ ಜನರನ್ನು ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಇಂದು ರಾತ್ರಿ 9 ಗಂಟೆಯ ಬಳಿಕ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಉದ್ಯಾವರ ಪಡುಕೆರೆ, ಗಂಗೊಳ್ಳಿ, ಪಡುಬಿದ್ರೆ ಕಾಪು, ಉಚ್ಚಿಲ ಹೆಜಮಾಡಿ ಮತ್ತಿತರ ಕಡೆಗಳಲ್ಲಿ ಭಾರೀ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇದರ ಪರಿಣಾಮ ತೀರದಲ್ಲಿ ನಿಲ್ಲಿಸಿರುವ ಹಲವು ದೋಣಿಗಳು ಅಪಾಯಕ್ಕೆ ಸಿಲುಕಿವೆ.
ದೋಣಿಗಳನ್ನು ರಕ್ಷಿಸಿ ತೀರದಿಂದ ದೂರ ಕೊಂಡೊಯ್ಯಲು ಮೀನುಗಾರರು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ತೀರದಲ್ಲಿರುವ ಸಣ್ಣ ಬೋಟ್‌ಗಳನ್ನು ತೆರವುಗೊಳಿಸಲಾಗುತ್ತಿದೆ. ಉದ್ಯಾವರ ಪಡುಕೆರೆಯಲ್ಲಿ ಬೃಹತ್ ಅಲೆಗಳು ಕಾಂಕ್ರಿಟ್ ರಸ್ತೆಗೆ ಅಪ್ಪಳಿಸುತ್ತಿರುವುದು ಕಂಡುಬಂದಿದೆ.
ಗಂಗೊಳ್ಳಿಯಲ್ಲಿ ತೀರದಲ್ಲಿ ನಿಲ್ಲಿಸಿರುವ ಹಲವು ದೋಣಿಗಳು ಅಪಾಯಕ್ಕೆ ಸಿಲುಕಿದ್ದು, ಅವುಗಳನ್ನು ರಕ್ಷಿಸುವ ಕಾರ್ಯದಲ್ಲಿ ಮೀನುಗಾರರು ಶ್ರಮಿಸುತ್ತಿದ್ದಾರೆ.
ಈ ನಡುವೆ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಸೈಂಟ್ ಮೇರಿಸ್ ದ್ವೀಪಕ್ಕೆ ಬೋಟ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಪಡುಕೆರೆಗೆ ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
‘‘ಪ್ರಸ್ತುತ ಚಂಡ ಮಾರುತವು ತೀರದಿಂದ 200 ನಾಟೆಕಲ್ ದೂರದಲ್ಲಿದ್ದು, ಇದರ ಪರಿಣಾಮ ಸಮುದ್ರದಲ್ಲಿ ಬೃಹತ್ ಅಲೆಗಳು ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ಕೋಸ್ಟಲ್ ಗಾರ್ಡ್‌ನವರು ಸಮುದ್ರ ತೀರದಲ್ಲಿ ಗಸ್ತು ತೀರದಲ್ಲಿ ತಿರುಗುತ್ತಿದ್ದಾರೆ. ಸದ್ಯಕ್ಕೆ ಮನೆಗಳು ಸ್ಥಳಾಂತರಿಸಲು ನಿರ್ಧರಿಸಿಲ್ಲ’ ಎಂದು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ತಿಳಿಸಿದ್ದಾರೆ.







