ಚಂಡಮಾರುತ: ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ
ಕೇರಳ ಸಿಎಂ ಪಿಣರಾಯಿ ವಿಜಯನ್ ಘೋಷಣೆ

ಕೊಲ್ಲಂ, ಡಿ.2: ಒಖಿ ಚಂಡಮಾರುತದ ಹಾವಳಿಗೆ ಸಿಲುಕಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಪರಹಾರ ಧನ ನೀಡಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ.
ಮೀನುಗಾರಿಕೆ ಇಲಾಖೆ ಘೋಷಿಸಿರುವ 4 ಲಕ್ಷ ರೂ. ಪರಿಹಾರ ಧನದ ಜೊತೆ ಹೆಚ್ಚುವರಿಯಾಗಿ ಈ ಮೊತ್ತವನ್ನು ನೀಡಲಾಗುತ್ತದೆ. ಅಲ್ಲದೆ ಮೀನುಗಾರಿಕೆ ದೋಣಿ ಹಾಗೂ ಇತರ ಪರಿಕರಗಳನ್ನು ಕಳೆದುಕೊಂಡವರಿಗೂ ಸೂಕ್ತ ನೆರವು ನೀಡಲಾಗುವುದು. ಎಂದವರು ತಿಳಿಸಿದ್ದಾರೆ. ಚಂಡಮಾರುತದ ಅಬ್ಬರಕ್ಕೆ ಸಮುದ್ರದ ಮಧ್ಯೆ ಅತಂತ್ರ ಸ್ಥಿತಿಯಲ್ಲಿದ್ದ ಕೇರಳದ 393 ಮತ್ತು ಲಕ್ಷದ್ವೀಪದ 138 ಮೀನುಗಾರರನ್ನು ರಕಿ್ಷಸಲಾಗಿದೆ ಎಂದು ವಿಜಯನ್ ತಿಳಿಸಿದ್ದಾರೆ.
ಕೇರಳ ಮತ್ತು ದಕ್ಷಿಣ ತಮಿಳುನಾಡಿನಲ್ಲಿ ಚಂಡಮಾರುತದ ಅಬ್ಬರದಿಂದ ಕಳೆದ ಎರಡು ದಿನದಲ್ಲಿ ಕನಿಷ್ಟ 12 ಮಂದಿ ಬಲಿಯಾಗಿದ್ದಾರೆ. ಕನ್ಯಾಕುಮಾರಿ ಮತ್ತು ತಿರುನೆಲ್ವೆೀಲಿ ಜಿಲ್ಲೆಗಳಲ್ಲಿ ಗರಿಷ್ಟ ಹಾನಿಯಾಗಿದೆ.
ಈ ಮಧ್ಯೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಕೇರಳ ವಿಧಾನಸಭೆಯ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, ಒಖಿ ಚಂಡಮಾರುತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಆಗ್ರಹಿಸಿದ್ದಾರೆ. ಚಂಡಮಾರುತದ ಹಾವಳಿಗೆ ಸಿಕ್ಕಿರುವ ರಾಜ್ಯಗಳಿಗೆ ಸೂಕ್ತ ನೆರವು ಒದಗಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ ಅವರು, ಗಾಯಗೊಂಡವರಿಗೆ ರಾಜ್ಯ ಸರಕಾರ ಘೋಷಿಸಿರುವ 15,000 ರೂ. ಪರಿಹಾರಧನವನ್ನು 50,000 ರೂ.ಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಅತಂತ್ರಸ್ಥಿತಿಯಲ್ಲಿ ಸಮುದ್ರದ ಮಧ್ಯೆ ಸಿಲುಕಿಕೊಂಡಿರುವ ಎಲ್ಲಾ ಮೀನುಗಾರರನ್ನು ರಕ್ಷಿಸಲು ನೌಕಾಸೇನೆ, ವಾಯುಸೇನೆ ಹಾಗೂ ತಟರಕ್ಷಣಾ ಪಡೆ ಕಾರ್ಯೋನ್ಮುಖವಾಗಿದೆ. 20 ನೌಕೆಗಳನ್ನು ಹಾಗೂ 8 ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ರಕ್ಷಣಾ ಸಚಿೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ತಮಿಳುನಾಡು: ಪರಿಹಾರ ಮತ್ತು ಪುನರ್ವಸತಿ ಕಾರ್ಯಾಚರಣೆಗೆ 25 ಕೋಟಿ ರೂ. ನಿಧಿಯನ್ನು ತೆಗೆದಿರಿಸಿರುವುದಾಗಿ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ತಿಳಿಸಿದ್ದಾರೆ. ಪರಿಸ್ಥಿತಿಯ ಬಗ್ಗೆ ಗೃಹಸಚಿವ ರಾಜನಾಥ್ ಸಿಂಗ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಪಳನಿಸ್ವಾಮಿ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಅವರಿಗೆ ಮಾಹಿತಿ ನೀಡಿದರು . ಕೇಂದ್ರವು ತಮಿಳುನಾಡಿಗೆ ಸಕಲ ನೆರವು ನೀಡುವ ಭರವಸೆ ನೀಡಿದೆ ಎಂು ಸರಕಾರದ ಮೂಲಗಳು ತಿಳಿಸಿವೆ.
ನೌಕಾಪಡೆಯ ಐಐನ್‌ಎಸ್ ನಿರೀಕ್ಷಕ್, ಐಎನ್‌ಎಸ್ ಜಮುನಾ ಮತ್ತು ಐಎನ್‌ಎಸ್ ಸಾಗರಧ್ವನಿ ನೌಕೆಗಳು ತಿರುವಂತಪುರಂ ಹಾಗೂ ಕೊಲ್ಲಂನಲ್ಲಿ ರಕ್ಷಣಾ ಕಾರ್ಯಾಚರಣೆ ನಿರತವಾಗಿದ್ದರೆ ಐಎನ್‌ಎಸ್ ಶಾರ್ದೂಲ್ ಮತ್ತು ಐಎನ್‌ಎಸ್ ಶಾರದಾ ನೌಕೆಗಳು ಲಕ್ಷದ್ವೀಪದತ್ತ ಹೊರಟಿವೆ ಎಂದು ಸೇನೆಯ ಮೂಲಗಳು ತಿಳಿಸಿವೆ.







