ಓಖಿ ಚಂಡಮಾರುತ ಪ್ರಭಾವ: ಉಳ್ಳಾಲ, ಸೋಮೇಶ್ವರದಲ್ಲಿ ತೀವ್ರಗೊಂಡ ಸಮುದ್ರದ ಅಬ್ಬರ
ಸಮುದ್ರ ತೀರದ ನಿವಾಸಿಗಳ ತೆರವು

ಮಂಗಳೂರು, ಡಿ. 2: ಸೋಮೇಶ್ವರ ಬೀಚ್‌ನಲ್ಲಿ ಸಮುದ್ರದ ಅಲೆಗಳ ಅಬ್ಬರ ತೀವ್ರಗೊಂಡಿದ್ದು, ಮನೆಗಳಿಗೆ ನೀರು ಅಪ್ಪಲಿಸಿದ್ದು, ಕೆಲವು ಮನೆಗಳು ಅಪಾಯದಂಚಿನಲ್ಲಿವೆ. ಘಟನೆಯಿಂದ ಸ್ಥಳೀಯ ನಾಗರಿಕರಲ್ಲಿ ಆತಂಕ ಮನೆ ಮಾಡಿದೆ.
ಶನಿವಾರ ಸಂಜೆಯಿಂದಲೇ ಸಮುದ್ರದ ಅಲೆಗಳಲ್ಲಿ ಏರಿಳಿತ ಕಂಡುಬಂದಿದ್ದು, ರಾತ್ರಿ ಹೊತ್ತು ಬಿರುಸುಗೊಂಡಿದೆ. ಅಲ್ಲೆಗಳು ಬೃಹದಾಕಾರದಲ್ಲಿ ತೀರವನ್ನು ಅಪ್ಪಳಿಸುತ್ತಿವೆ.
ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಕೈಕೋ, ಮುಕ್ಕಚ್ಚೇರಿ, ಕಿಲೆರಿಯಾ ನಗರ, ಸುಭಾಷ ನಗರ ಭಾಗದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಕಡಲ ತೀರದ ಮನೆಗಳು ಅಪಾಯದಂಚಿನಲ್ಲಿವೆ.
ಉಚ್ಚಿಲದಲ್ಲಿ ರಸ್ತೆಗೆ ನೀರು ಅಪ್ಪಳಿಸಿದ್ದು, ಮೊಗವೀರಪಟ್ನದಲ್ಲೂ ಸಮುದ್ರದ ಅಲೆಗಳ ಅಬ್ಬರ ಬಿರುಸುಗೊಂಡಿದೆ. ಮುನ್ನಚ್ಚೆರಿಕೆಯಾಗಿ ಕಿಲರಿಯನಗರದಲ್ಲಿ ಸ್ಥಳೀಯರು ಮನೆಗಳನ್ನು ತೆರವುಗೊಳಿಸಿದ್ದಾರೆ. ಕೋಟೆಪುರದಲ್ಲಿ ಪ್ಲಾಂಟ್‌ವೊಂದರ ಸಿಬ್ಬಂದಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಉಳ್ಳಾಲದ ರೆಸಾರ್ಟ್‌ವೊಂದಕ್ಕೆ ಸಮುದ್ರ ನೀರು ಅಪ್ಪಳಿಸಿದೆ.
ಕೈಕೊ ಮತ್ತು ಹಿಳರಿಯಾ ನಗರಗಳಲ್ಲಿ ಕಡಲ ಅಬ್ಬರ ತೀವ್ರಗೊಂಡಿದ್ದು, ಈ ಎರಡು ಪ್ರದೇಶಗಳ ತೀರ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಉಳ್ಳಾಲ ದರ್ಗಾ ಸಮಿತಿಯಿಂದ ಪರ್ಯಾಯ ವ್ಯವಸ್ಥೆ
ಕಡಲಬ್ಬರದ ಹಿನ್ನೆಲೆಯಲ್ಲಿ ತೆರವುಗೊಂಡಿರುವ ತೀರದ ನಿವಾಸಿಗಳನ್ನು ಉಳ್ಳಾಲ ದರ್ಗಾ ಸಮಿತಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.







