ಹ್ಯಾಟ್ರಿಕ್ ಶತಕ ದಾಖಲಿಸಿದ ಮೊದಲ ನಾಯಕ ಕೊಹ್ಲಿ

ಹೊಸದಿಲ್ಲಿ, ಡಿ.2: ದಿಲ್ಲಿ ಆಟಗಾರ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಶತಕ ದಾಖಲಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹ್ಯಾಟ್ರಿಕ್ ಶತಕ ದಾಖಲಿಸಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ.
ಹಲವು ಮಂದಿ ನಾಯಕರು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಶತಕ ದಾಖಲಿಸಿದ್ದರು. ಆದರೆ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಶತಕ ದಾಖಲಿಸಿದವರು ಕಡಿಮೆ. ಕೊಹ್ಲಿ 2017ನೇ ವರ್ಷ 11 ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದಾರೆ. ಸಚಿನ್ ತೆಂಡುಲ್ಕರ್ ಒಂದೇ ವರ್ಷ 12 ಶತಕ ಬಾರಿಸಿದ್ದರು. ಕೊಹ್ಲಿ ಕೋಲ್ಕತಾದಲ್ಲಿ ಮೊದಲ ಟೆಸ್ಟ್ ನಲ್ಲಿ ಔಟಾಗದೆ 104 ರನ್, ನಾಗ್ಪುರದಲ್ಲಿ ಎರಡನೇ ಟೆಸ್ಟ್ ನಲ್ಲಿ 213ರನ್ ಮತ್ತು ಹೊಸದಿಲ್ಲಿಯಲ್ಲಿ ಮೂರನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಔಟಾಗದೆ 156 ರನ್ ಗಳಿಸಿದ್ದಾರೆ.
ಟೆಸ್ಟ್ ನಲ್ಲಿ 5,000 ರನ್ ಪೂರೈಸಿದ ಕೊಹ್ಲಿ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಟೆಸ್ಟ್‌ನಲ್ಲಿ 5,000 ರನ್‌ಗಳ ಮೈಲುಗಲ್ಲನ್ನು ಮುಟ್ಟಿದ್ದಾರೆ.
ಟೆಸ್ಟ್‌ನ ಮೊದಲ ದಿನ ಆರಂಭಿಕ ದಾಂಡಿಗ ಶಿಖರ್ ಧವನ್ ಮತ್ತು ಚೇತೇಶ್ವರ ಪೂಜಾರ ತಲಾ 23 ರನ್ ಗಳಿಸಿ ನಿರ್ಗಮಿಸಿದ್ದರು. ಆದರೆ ಮುರಳಿ ವಿಜಯ್‌ಗೆ ಸಾಥ್ ನೀಡಿದ ಕೊಹ್ಲಿ ಟೆಸ್ಟ್‌ನಲ್ಲಿ ಶತಕದೊಂದಿಗೆ ದಾಖಲೆ ಬರೆದರು.ಕೊಹ್ಲಿ 5,000 ರನ್ ಪೂರ್ಣಗೊಳಿಸಿದ ಭಾರತದ 11ನೇ ಬ್ಯಾಟ್ಸ್‌ಮನ್ ಮತ್ತು ವೇಗವಾಗಿ ಈ ಸಾಧನೆ ಮಾಡಿದ ಭಾರತದ 4ನೇ ದಾಂಡಿಗ. ಕೊಹ್ಲಿ ಶನಿವಾರ 25 ರನ್ ಗಳಿಸುತ್ತಿದ್ದಂತೆ ಈ ಮೈಲುಗಲ್ಲು ತಲುಪಿದರು.ಕೊಹ್ಲಿ 63ನೇ ಟೆಸ್ಟ್‌ನ 105ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಸುನೀಲ್ ಗವಾಸ್ಕರ್ 95ನೇ, ವೀರೇಂದ್ರ ಸೆಹ್ವಾಗ್ 99ನೇ ಮತ್ತು ಸಚಿನ್ 103ನೇ ಇನಿಂಗ್ಸ್‌ನಲ್ಲಿ 5 ಸಾವಿರ ರನ್ ಪೂರ್ಣಗೊಳಿಸಿದ್ದರು. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುತ್ತಿರುವ ಆಟಗಾರರ ಪೈಕಿ ಇಂಗ್ಲೆಂಡ್‌ನ ಜೋ ರೂಟ್ ಮತ್ತು ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ 97 ಇನಿಂಗ್ಸ್‌ಗಳಲ್ಲಿ 5 ಸಾವಿರ ರನ್ ಗಳಿಸಿದ್ದರು. ಆ ಬಳಿಕದ ಸ್ಥಾನವನ್ನು ಕೊಹ್ಲಿ ಪಡೆದಿದ್ದಾರೆ. ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲ ಮತ್ತು ಆಸ್ಟ್ರೇಲಿಯದ ಡೇವಿಡ್ ವಾರ್ನರ್ 109 ಇನಿಂಗ್ಸ್‌ಗಳಲ್ಲಿ ,ನ್ಯೂಝಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರು 110 ಇನಿಂಗ್ಸ್‌ಗಳಲ್ಲಿ 5,000 ರನ್ ಪೂರ್ಣಗೊಳಿಸಿದ್ದರು. ಆಸ್ಟ್ರೇಲಿಯದ ಸರ್ ಡಾನ್ ಬ್ರಾಡ್ಮನ್ ಕೇವಲ 56 ಇನಿಂಗ್ಸ್‌ಗಳಲ್ಲಿ 5,000 ರನ್ ಪೂರ್ಣಗೊಳಿಸಿದ ದಾಖಲೆ ಬರೆದಿದ್ದರು.







