ಮಾಧ್ಯಮಗಳಿಂದ ಸತ್ಯ ತಿರುಚುವಿಕೆ: ಡಾ. ನಿತ್ಯಾನಂದ ಶೆಟ್ಟಿ
ಮೂಡಬಿದ್ರೆ, (ರತ್ನಾಕರ ವರ್ಣಿ ವೇದಿಕೆ), ಡಿ.2:ಇಂದಿನ ನಮ್ಮ ಮಾಧ್ಯಮಗಳು ಸತ್ಯ ತಿರುಚಿ ತನ್ನ ವಾಸ್ತವತೆಗೆ ತಕ್ಕಂತೆ ಅದನ್ನು ಪರಿವರ್ತಿಸಿಕೊಳ್ಳುವುದನ್ನು ರೂಢಿಸಿಕೊಳ್ಳುತ್ತಿವೆ. ಕಣ್ಣಾರೆ ನೋಡಿದ್ದು ಮಾತ್ರ ಸತ್ಯ ಎನ್ನುವ ಸುಳ್ಳನ್ನು ಸಮಾಜಕ್ಕೆ ಕಟ್ಟಿಕೊಡುತ್ತಿವೆ ಎಂದು ತುಮಕೂರು ವಿವಿಯ ಪ್ರಾಧ್ಯಾಪಕ ಡಾ. ನಿತ್ಯಾನಂದ ಶೆಟ್ಟಿ ಅಭಿಪ್ರಾಯಿಸಿದರು.
ನುಡಿಸಿರಿಯಲ್ಲಿ ಎರಡನೇ ದಿನವಾದ ಇಂದು ಮಾಧ್ಯಮ-ಸ್ವವಿಮರ್ಶೆಯ ನೆಲೆ ಎಂಬ ದೃಶ್ಯ ಮಾದ್ಯಮದ ಕುರಿತು ವಿಚಾರ ಮಂಡಿಸಿದರು.
ಚಿಂತನೆಗಳ ಪ್ರತಿಪಾದನೆ ಮಾಡಬೇಕಿದ್ದ ದೃಶ್ಯ ಮಾಧ್ಯಮಗಳಿಂದು ದಿಕ್ಕು ತಪ್ಪುತ್ತಿವೆ. ದೃಶ್ಯ ಮಾಧ್ಯಮ ಉಳಿದ ಮಾಧ್ಯಮಗಳಿಗಿಂತ ವಿಸ್ತಾರವಾಗಿವೆ. ಆದರೆ ಅವುಗಳು ಸಮಾಜಕ್ಕೆ ಬುದ್ಧಿ ಹೇಳುವೆನೆಂಬ ಸರ್ವಜ್ಞಪೀಠದಲ್ಲಿ ಕುಳಿತು ಗರ್ವದಿಂದ ಬೀಗುತ್ತಿವೆ ಎಂದವರು ಅಸಮಾಧಾನಿಸಿದರು.
ಮಾಧ್ಯಮಗಳು ನೋಟ್ ಬ್ಯಾನ್, ವೈದ್ಯ ಮುಷ್ಕರ ಮುಂತಾದವುಗಳಿಂದ ಸಂಭವಿಸಿದ ನಷ್ಟಗಳ ಹೊಣೆಯನ್ನು ಸರ್ಕಾರದ ಮೇಲೆ ಹೊರಿಸುತ್ತಿವೆ, ಆದರೆ ಯು.ಆರ್. ಅನಂತಮೂರ್ತಿ ಅವರ ವಿವಾದಾತ್ಮಕ ಹೇಳಿಕೆಯ ಅರಿವೂ ಇಲ್ಲದ ಜನರಿಗೆ ಅದು ತಲುಪುವಂತೆ ಮಾಡಿ ಜೀವನದ ಮುಸ್ಸಂಜೆಯ ಘಟ್ಟದಲ್ಲಿ ನಿಂತಿದ್ದ ಅವರ ನೆಮ್ಮದಿಯನ್ನು ಹಾಳು ಮಾಡಿದವು. ಇಂಗ್ಲೆಂಡಿನ ರಾಣಿ ಡಯಾನಾ ಮಾಧ್ಯಮಗಳ ಭಯದಿಂದ ಅಪಘಾತದಲ್ಲಿ ಸಾವನ್ನಪ್ಪುವಂತೆ ಮಾಡಿದವು. ಈ ದುರಂತಗಳ ಹೊಣೆಯನ್ನೇಕೆ ಮಾಧ್ಯಮಗಳು ಹೊರುವುದಿಲ್ಲ ಎಂದು ಪ್ರಶ್ನಿಸಿದರು.
ಪತ್ರಿಕಾ ಮಾಧ್ಯಮದ ಕುರಿತು ವಿಚಾರ ಮಂಡಿಸಿದ ಪರ್ತಕರ್ತ ಡಾ. ನಿರಂಜನ್ ವಾನಳ್ಳಿ ಪತ್ರಿಕೆಯ ಬದಲಾದ ಆಯಾಮದ ಕುರಿತು ಮಾತನಾಡಿದರು
ಸಮಾಜಮುಖಿಯಲ್ಲದ ವಿಷಯಗಳು ಸುದ್ದಿಯಾಗಲಾರವು. ಆದರೆ ಪ್ರಸಕ್ತ ಸನ್ನಿವೇಶ ಇದಕ್ಕೆ ವಿರುದ್ಧವಾಗಿದೆ. ಪತ್ರಿಕೆಗಳು ಸ್ಪರ್ಧೆಗಿಳಿದಿರುವ ಈ ಕಾಲದಲ್ಲಿ ಪತ್ರಿಕೆಯು ದುಡ್ಡು ಬಿತ್ತಿ ದುಡ್ಡು ಬೆಳೆವ ಮಾಧ್ಯಮವಾಗಿ ಮಾರ್ಪಾಡಾಗಿದೆ ಎನ್ನುವುದು ಆತಂಕಕಾರಿ ಬೆಳವಣಿಗೆ ಎಂದವರು ಹೇಳಿದರು.
ಸ್ಪರ್ಧೆಯ ನಾಗಾಲೋಟದಲ್ಲಿ ನೈತಿಕತೆ ಕಳೆದುಕೊಳ್ಳುತ್ತಿರುವ ಪತ್ರಿಕೆಗಳು ಜನರ ವಾಣಿಯಾಗದೆ ಬಲಾಢ್ಯರ ಗದೆಯಾಗುತ್ತಿವೆ. ಈ ನಿಟ್ಟಿನಲ್ಲಿ ಪತ್ರಿಕಾ ಮಾಧ್ಯಮದ ಕುರಿತೊಂದು ಚಿಂತನೆ ಹಾಗು ಸ್ವವಿಮರ್ಶೆ ಅತ್ಯಗತ್ಯ ಎಂದರು.
ಸಾಮಾಜಿಕ ಜಾಲತಾಣ ಹಾಗು ಅಂತರ್ಜಾಲ ಮಾಧ್ಯಮದ ಕುರಿತು ಚರ್ಚಿಸಿದ ಎನ್. ರವಿಶಂಕರ್ ಸತ್ಯವು ಇಂದು ಮಾಧ್ಯಮಗಳಿಂದ ಅರೆ ಸತ್ಯವಾಗುತ್ತಿವೆ. ಜನರ ಕೆಲಸ ಇಂದು ಬದಲಾಗಿ ಅವರು ಪತ್ರಿಕೆಯನ್ನು ವೀಕ್ಷಿಸಿ ದೂರದರ್ಶನವನ್ನು ಓದುವಂತಾಗಿದೆ. ನೈತಿಕತೆಯ ತಳಹದಿ ತಪ್ಪುತ್ತಿರುವ ಈ ಘಟ್ಟದಲ್ಲಾದರೂ ಮಾಧ್ಯಮದ ಸ್ವವಿಮರ್ಶೆಯ ಅಗತ್ಯವಿದೆ ಎಂದು ತಮ್ಮ ವಿಚಾರ ಮಂಡಿಸಿದರು.
ಈ ಸಂದರ್ಭದಲ್ಲಿ ಆಳ್ವಾಸ್ ನುಡಿಸಿರಿ 2017 ರ ಆಧ್ಯಕ್ಞ, ನಾಗತಿಹಳ್ಳಿ ಚಂದ್ರಶೇಖರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ, ಎಮ್ ಮೋಹನ್ ಆಳ್ವ, ಸಾಹಿತಿ ಡಾ.ನಾ.ದಾ.ಶೆಟ್ಟಿ ಉಪಸ್ಥಿತರಿದ್ದರು.
ನೇಶನ್ ವಾಂಟ್ಸ್ ಟು ನೋ!
ದೃಶ್ಯಮಾಧ್ಯಮದಲ್ಲಿ ಪ್ರೈಮ್‌ಟೈಮ್‌ನಲ್ಲಿ ಕುಳಿತು ನೇಶನ್ ವಾಂಟ್ಸ್ ಟು ನೊ ಎಂದು ಅಬ್ಬರಿಸುವ ಮಾಧ್ಯಮಗಳ ಅವ್ಯವಹಾರಗಳು, ರಾಜಕೀಯ, ಪಕ್ಷಪಾತ ಧೋರಣೆ ಹಾಗೂ ಸ್ವಹಿತಾಸಕ್ತಿಯ ಮೇಲಾಟಗಳ ಬಗ್ಗೆ ಇಡೀ ದೇಶ ತಿಳಿಯಲು ಬಯಸುತ್ತಿದೆ ಎಂದು ತ್ಯಾನಂದ ಶೆಟ್ಟಿ ಮಾಧ್ಯಮಗಳನ್ನು ಕುಟುಕಿದರು.







