ಎಸ್ಟಿಪಿ ವಿರೋಧಿಸಿ ಅಪಾರ್ಟ್‌ಮೆಂಟ್ ನಿವಾಸಿಗಳು ಪ್ರತಿಭಟನೆ
ಬೆಂಗಳೂರು, ಡಿ.2: ಅವೈಜ್ಞಾನಿಕವಾಗಿರುವ ತ್ಯಾಜ್ಯನೀರು ಸಂಸ್ಕರಣಾ ಘಟಕ(ಎಸ್ಟಿಪಿ)ವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಅಪಾರ್ಟ್‌ಮೆಂಟ್ ಸಮುಚ್ಚಯಗಳ ನಿವಾಸಿಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲೂಎಸ್ಸೆಸ್‌ಬಿ) ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿ ನಿವಾಸಿಗಳು ನಗರದಾದ್ಯಂತ ಮೌನ ಪ್ರತಿಭಟನೆ ನಡೆಸಿದರು.
ಬೆಂಗಳೂರು ಅಪಾರ್ಟ್‌ಮೆಂಟ್ ಸಮುಚ್ಚಯಗಳ ಒಕ್ಕೂಟದ (ಬಿಎಎಫ್) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜೆ.ಪಿ.ನಗರ, ಬನ್ನೇರುಘಟ್ಟ ರಸ್ತೆ, ಜಯನಗರ, ಬನಶಂಕರಿ, ಎಚ್.ಎಸ್.ಆರ್ ಲೇಔಟ್, ಬೆಳ್ಳಂದೂರು, ಮೈಸೂರು ರಸ್ತೆ, ಮಲ್ಲೇಶ್ವರ, ಆರ್.ಟಿ.ನಗರ, ಹೆಬ್ಬಾಳ, ಹಳೇ ಮದ್ರಾಸ್ ರಸ್ತೆ ಹಾಗೂ ಕೋರಮಂಗಲ ಭಾಗದ ಅಪಾರ್ಟ್‌ಮೆಂಟ್ ಸಮುಚ್ಚಯಗಳ ಸಾವಿರಾರು ನಿವಾಸಿಗಳು ಭಾಗಿಯಾಗಿದ್ದರು.
2016ರ ಹಿಂದೆ ನಿರ್ಮಿಸಿರುವ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಎಸ್ಟಿಪಿ ಅಳವಡಿಕೆ ಕಡ್ಡಾಯ ಮಾಡಿರುವುದು ಸರಿಯಲ್ಲ. ಹಳೇ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಎಸ್ಟಿಪಿ ಅಳವಡಿಕೆಗೆ ಜಾಗವೂ ಇಲ್ಲ. ಹೀಗಾಗಿ, ಆದೇಶವನ್ನು ಹಿಂಪಡೆಯಬೇಕು ಎಂದು ಬ್ರಿಗೇಡ್ ಮಿಲೇನಿಯಂ ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿ ರಾಜೇಶ್ ಒತ್ತಾಯಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಹಾಗೂ ಬಿಡಬ್ಲೂಎಸ್ಸೆಸ್‌ಬಿಯ ಆದೇಶದಂತೆ ಹಳೇ ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್ಟಿಪಿ ನಿರ್ಮಿಸಿದರೆ ಕಟ್ಟಡಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಅವೈಜ್ಞಾನಿಕವಾಗಿರುವ ಎಸ್ಟಿಪಿ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಕಟ್ಟಾಜ್ಞೆ ಹೊರಡಿಸಿರುವುದು ಸೂಕ್ತವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಸಿದರು.
ಬಿಎಎಫ್ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಮಾತನಾಡಿ, ಎಸ್ಟಿಪಿ ಅಳವಡಿಕೆಗೆ ನಮ್ಮ ವಿರೋಧವಿಲ್ಲ. ಆದರೆ, ಹಳೆ ಅಪಾರ್ಟ್‌ಮೆಂಟ್‌ಗಳಲ್ಲಿ ಅವುಗಳ ಅಳವಡಿಕೆಗೆ ಜಾಗದ ಸಮಸ್ಯೆಯಿದೆ. ಈ ಬಗ್ಗೆ ಜಲ ಮಂಡಳಿ ಹಾಗೂ ಮಾಲಿನ್ಯ ನಿಯಂತ್ರಣಾ ಮಂಡಳಿಯು ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಬಿಎಎಫ್ ಜಂಟಿ ಕಾರ್ಯದರ್ಶಿ ವಿದ್ಯಾ ಮಾತನಾಡಿ, ಕಸ ವಿಂಗಡಣೆ, ಮಳೆನೀರು ಕೊಯ್ಲು ವ್ಯವಸ್ಥೆಗಳು, ಹಸಿ ಕಸ ನಿರ್ವಹಣಾ ವ್ಯವಸ್ಥೆ, ಸಮಯಕ್ಕೆ ಸರಿಯಾಗಿ ಶುಲ್ಕ ಪಾವತಿಸುವುದರಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯಗಳು ಒಳ್ಳೆಯ ಹೆಸರನ್ನು ಪಡೆದಿವೆ. ಆದರೂ ಅಲ್ಲಿನ ನಿವಾಸಿಗಳಿಗೆ ಸಂಕಷ್ಟ ತಪ್ಪಿಲ್ಲ. ನಾಗರಿಕ ಸಂಸ್ಥೆಗಳು ಒಂದಿಲ್ಲೊಂದು ಹೊಸ ನಿಯಮಗಳನ್ನು ಜಾರಿಗೆ ತಂದು ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿದರು.







