ಫಿಫಾ ವಿಶ್ವಕಪ್: ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜೆಂಟೀನ-ಸ್ಪೇನ್?

ಮಾಸ್ಕೋ, ಡಿ.2: ಎರಡು ಬಾರಿ ವಿಶ್ವ ಚಾಂಪಿಯನ್‌ಪಟ್ಟಕ್ಕೇರಿರುವ ಅರ್ಜೆಂಟೀನ ತಂಡ 2018ರಲ್ಲಿ ರಶ್ಯದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್ ಹಂತದಲ್ಲಿ ಸ್ಪೇನ್ ತಂಡವನ್ನು ಎದುರಿಸುವ ಸಾಧ್ಯತೆಯಿದೆ.
ಶುಕ್ರವಾರ ರಶ್ಯದಲ್ಲಿ ನಡೆದ ಡ್ರಾ ಪ್ರಕ್ರಿಯೆಯಲ್ಲಿ ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಸ್ಪೇನ್ ತಂಡ ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯಬೇಕಾದರೆ ಜೂ.15 ರಂದು ಸೋಚಿಯಲ್ಲಿ ನಡೆಯಲಿರುವ ತನ್ನ ಮೊದಲ ಗ್ರೂಪ್ ಪಂದ್ಯದಲ್ಲಿ ಕ್ರಿಸ್ಟಿಯನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡವನ್ನು ಮಣಿಸಬೇಕಾಗಿದೆ. ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಉರುಗ್ವೆ ತಂಡ ಕಳೆದ ಎರಡು ವಿಶ್ವಕಪ್ ಸಾಧನೆಯನ್ನು ಪುನರಾವರ್ತಿಸಿದರೆ ಈ ಬಾರಿ ನಾಕೌಟ್ ಹಂತಕ್ಕೇರುವುದು ನಿಶ್ಚಿತ. ‘ಎ’ ಗುಂಪಿನಲ್ಲಿ ಉರುಗ್ವೆ ತಂಡದೊಂದಿಗೆ ಈಜಿಪ್ಟ್, ಸೌದಿ ಅರೇಬಿಯ ಹಾಗೂ ಆತಿಥೇಯ ರಶ್ಯ ತಂಡಗಳಿವೆ. 2014ರ ಫೈನಲಿಸ್ಟ್ ಅರ್ಜೆಂಟೀನ ‘ಡಿ’ ಗುಂಪಿನಲ್ಲಿ ಕ್ರೊಯೇಷಿಯ, ನೈಜೀರಿಯ ಹಾಗೂ ಐಸ್‌ಲ್ಯಾಂಡ್ ತಂಡದೊಂದಿಗೆ ಸ್ಥಾನ ಪಡೆದಿದೆ.
ಆರನೇ ಬಾರಿ ವಿಶ್ವಕಪ್ ಗೆಲ್ಲುವತ್ತ ಚಿತ್ತವಿರಿಸಿರುವ ಬ್ರೆಝಿಲ್ ತಂಡ ‘ಇ’ ಗುಂಪಿನಲ್ಲಿ ಸ್ವಿಟ್ಝರ್ಲೆಂಡ್, ಸರ್ಬಿಯ ಹಾಗೂ ಕೋಸ್ಟರಿಕಾ ತಂಡಗಳೊಂದಿಗೆ ಸ್ಥಾನ ಪಡೆದಿದ್ದು, ಗ್ರೂಪ್ ಹಂತದಲ್ಲಿ ಹೆಚ್ಚು ಸ್ಪರ್ಧೆ ಎದುರಿಸುವ ಸಾಧ್ಯತೆಯಿಲ್ಲ. ಆದರೆ, ಸ್ವಲ್ಪ ಎಡವಿದರೆ ಇ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಬೇಕಾಗಬಹುದು. ಅಂತಿಮ-16ರ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಜರ್ಮನಿಯನ್ನು ಎದುರಿಸಬೇಕಾಗುತ್ತದೆ.
ಒಂದು ವೇಳೆ ಬ್ರೆಝಿಲ್ ತಂಡ ‘ಇ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಮೆಕ್ಸಿಕೊ ಅಥವಾ ಸ್ವೀಡನ್ ತಂಡವನ್ನು ಎದುರಿಸಲಿದೆ. ಜೋಕಿಮ್ ಲಾ ಕೋಚಿಂಗ್‌ನಲ್ಲಿ ಪಳಗಿರುವ ಜರ್ಮನಿ ತಂಡ ‘ಎಫ್’ ಗುಂಪಿನಲ್ಲಿ ಮೆಕ್ಸಿಕೊ, ಸ್ವೀಡನ್ ಹಾಗೂ ದಕ್ಷಿಣ ಕೊರಿಯಾ ತಂಡದೊಂದಿಗೆ ಸ್ಥಾನ ಪಡೆದಿದೆ. ನಾಕೌಟ್ ಹಂತಕ್ಕೇರುವ ಫೇವರಿಟ್ ತಂಡವಾಗಿರುವ ಜರ್ಮನಿ ‘ಇ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿದೆ.







