ನಿಮ್ಮ ಆರೋಗ್ಯದ ಮೇಲೆ ಸರ್ಕಾರ ಮಾಡುವ ವಾರ್ಷಿಕ ವೆಚ್ಚವೆಷ್ಟು ಗೊತ್ತೇ ?

ಹೊಸದಿಲ್ಲಿ, ಡಿ.3: ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ನೀಡುವ ವೈದ್ಯಕೀಯ ವೆಚ್ಚದ ಆರನೇ ಒಂದರಷ್ಟು ಭಾಗವನ್ನು ಮಾತ್ರ ಜನಸಾಮಾನ್ಯರ ಆರೋಗ್ಯಕ್ಕೆ ವೆಚ್ಚ ಮಾಡುತ್ತಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಮಾಡುವ ಒಟ್ಟು ವೆಚ್ಚವಾಗಿದೆ
2014-15ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಲೆಕ್ಕಪತ್ರಗಳ ಅಂಕಿ-ಅಂಶಗಳಿಂದ ತಿಳಿದುಬರುವಂತೆ, ಸರ್ಕಾರಗಳು ಸರಾಸರಿ 1,108 ರೂಪಾಯಿಗಳನ್ನು ಪ್ರತಿಯೊಬ್ಬನ ಆರೋಗ್ಯ ಸೇವೆಯ ಮೇಲೆ ವೆಚ್ಚ ಮಾಡುತ್ತಿದೆ. ಆದರೆ ಸರ್ಕಾರಿ ಉದ್ಯೋಗಿಗಳಿಗೆ ವಾರ್ಷಿಕ 6,300 ರೂಪಾಯಿ ವೈದ್ಯಕೀಯ ವೆಚ್ಚ ಭರಿಸುತ್ತಿದೆ. ಅತಿಹೆಚ್ಚು ಉದಾರವಾಗಿ ವೆಚ್ಚ ಮಾಡುವ ಹಿಮಾಚಲ ಪ್ರದೇಶದಲ್ಲಿ ಗರಿಷ್ಠ ಎಂದರೆ 2,000 ರೂಪಾಯಿ ವೆಚ್ಚ ಮಾಡಲಾಗುತ್ತಿದೆ.
ಎನ್‌ಎಚ್‌ಎ ಪ್ರಕಾರ, ವ್ಯಕ್ತಿಯೊಬ್ಬನ ಸರಾಸರಿ ಆರೋಗ್ಯ ವೆಚ್ಚ 3,826 ರೂಪಾಯಿ ಆಗುತ್ತಿದೆ. ಈ ಪೈಕಿ ಶೇಕಡ 63ರಷ್ಟು ಭಾಗವನ್ನು ಅಂದರೆ 2,394 ರೂಪಾಯಿಗಳನ್ನು ವ್ಯಕ್ತಿ ಸ್ವತಃ ಖರ್ಚು ಮಾಡಬೇಕಾಗುತ್ತದೆ.
ಸರ್ಕಾರ ನಿವೃತ್ತ ಹಿರಿಯ ಅಧಿಕಾರಿಗಳು, ಹಾಲಿ ಹಾಗೂ ಮಾಜಿ ಸಂಸದರು, ನ್ಯಾಯಾಂಗ ವ್ಯವಸ್ಥೆಯ ಹಿರಿಯ ಸಿಬ್ಬಂದಿಗಾಗಿ 2,300 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು 2015ರ ಫೆಬ್ರವರಿ 27ರಂದು ನೀಡಿದ ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ಪ್ರಯೋಜವನ್ನು 36.7 ಲಕ್ಷ ಮಂದಿ ಪಡೆಯುತ್ತಿದ್ದಾರೆ. ಅಂದರೆ ಸರಾಸರಿ 6,300 ರೂಪಾಯಿ ಸಿಗುತ್ತಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಅನ್ವಯ 2014-15ರಲ್ಲಿ ಕೇಂದ್ರ ಸರ್ಕಾರ 20,199 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಅಂದರೆ 125 ಕೋಟಿ ಮಂದಿಗೆ ಸರಾಸರಿ 162 ರೂಪಾಯಿ ಮಾತ್ರ ಸಿಗುತ್ತಿದೆ.







