ಪಡುಕೆರೆಯಲ್ಲಿ ಕಡಲು ಮತ್ತೆ ಪ್ರಕ್ಷುಬ್ಧ: ತೀರವಾಸಿಗಳಲ್ಲಿ ಹೆಚ್ಚಿದ ಆತಂಕ

ಉಡುಪಿ, ಡಿ.3: ಒಖಿ ಚಂಡಮಾರುತದ ಪ್ರಭಾವ ರವಿವಾರವೂ ಕರಾವಳಿಯಲ್ಲಿ ಮುಂದುವರಿದಿದ್ದು, ಉದ್ಯಾವರ ಪಡುಕೆರೆಯಲ್ಲಿ ಬೆಳಗ್ಗೆಯಿಂದ ಮತ್ತೆ ಕಡಲು ಬೋರ್ಗೆರೆಯಲಾರಂಭಿಸಿದೆ. ಇದು ಸಹಜವಾಗಿ ತೀರವಾಸಿಗಳಲ್ಲಿ ಆತಂಕ ಮೂಡಿಸಿದೆ.
ನಿನ್ನೆ ರಾತ್ರಿ 9 ಗಂಟೆಯ ಬಳಿಕ ಉಡುಪಿ ಮತ್ತು ದ.ಕ. ಜಿಲ್ಲೆಯ ಕರಾವಳಿ ತೀರದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿತ್ತು. ತಡರಾತ್ರಿಯ ಬಳಿಕ ಒಂದಿಷ್ಟು ಶಾಂತಗೊಂಡಿದ್ದ ಕಡಲು ಬೆಳಗ್ಗೆಯಿಂದ ಮತ್ತೆ ಅಬ್ಬರಿಸಲಾರಂಭಿಸಿದೆ. ಸುಮಾರು ಐದು ಅಡಿ ಎತ್ತರದ ಅಲೆಗಳು ತೀರ ಪ್ರದೇಶವನ್ನು ಅಪ್ಪಳಿಸುತ್ತಿವೆ. ನಿನ್ನೆ ರಾತ್ರಿ ಈ ಅಲೆಗಳ ಎತ್ತರ ಸುಮಾರು 8 ಅಡಿಗಳಷ್ಟಿತ್ತು. ಅಲೆಗಳ ರಭಸಕ್ಕೆ ತೀರದಲ್ಲಿ ಹಾಕಲಾಗಿರುವ ಕಲ್ಲುಗಳು ಸಮುದ್ರಪಾಲಾಗುತ್ತಿವೆ. ಈ ನಡುವೆ ಸಮುದ್ರದಲ್ಲಿದ್ದ ತಮಿಳುನಾಡಿನ ಕೆಲವು ಬೋಟ್‌ಗಳು ಮಲ್ಪೆ ದಡ ಸೇರಿವೆ. ಸೈಂಟ್ ಮೇರಿಸ್‌ಗೆ ಬೋಟ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಹಠಾತ್ತಾಗಿ ಸಮುದ್ರ ಪ್ರಕ್ಷುಬ್ಧಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪಡುಕೆರೆಯ ಸ್ಥಳೀಯ ನಿವಾಸಿ ದಯಾನಂದ ಶ್ರೀಯಾನ್, ರಭಸದ ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ದಡದಲ್ಲಿ ಹಾಕಲಾಗಿರುವ ಕಲ್ಲುಗಳು ಸಮುದ್ರಪಾಲಾಗಿವೆ. ಇಂತಹ ಭಾರೀ ಅಲೆಗಳನ್ನು ಜೀವನದಲ್ಲಿ ಮೊದಲ ಬಾರಿ ನೋಡುತ್ತಿದ್ದೇನೆ ಎಂದು ಆತಂಕಿತರಾಗಿ ನುಡಿದಿದ್ದಾರೆ.
ಉದ್ಯಾವರ ಕೊಪ್ಲದಿಂದ ಮಟ್ಟು ಕೊಪ್ಲದವರೆಗೆ ಸುಮಾರು ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಇಂತಹ ಬೃಹತ್ ಅಲೆಗಳ ಅಬ್ಬರ ಕಂಡುಬರುತ್ತಿದೆ. ಈ ಪ್ರದೇಶದಲ್ಲಿರುವ ದೋಣಿಗಳನ್ನು ದಡದಿಂದ ಮೇಲೆತ್ತಲಾಗಿದೆ ಎಂದವರು ತಿಳಿಸಿದರು.
ಕೃಷ್ಣ ಕೋಟ್ಯಾನ್ ಎಂಬವರ ಮನೆಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿವೆ. ಈ ಪ್ರದೇಶದ ಸುಮಾರು 20ರಷ್ಟು ಮನೆಗಳ ನಿವಾಸಿಗಳು ಆತಂಕಿತರಾಗಿದ್ದಾರೆ. 25 ವರ್ಷಗಳ ಹಿಂದೆ ಕಡಲ್ಕೊರೆತ ತಡೆಗೋಡೆ ನಿರ್ಮಿಸಿರುವುದರಿಂದ ನಾವು ಅಪಾಯದಿಂದ ಪಾರಾಗಿದ್ದೇವೆ ಎಂದು ದಯಾನಂದ ಶ್ರೀಯಾನ್ ಹೇಳುತ್ತಾರೆ.
ಅಲೆಗಳ ಅಬ್ಬರದ ವಿಚಾರ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಧ್ಯರಾತ್ರಿ ತೀರಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿ 2 ಗಂಟೆಯವರೆಗೂ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಸ್ಥಿತಿಯ ಅವಲೋಕನ ಮಾಡಿದ್ದರು.







