ಉಳ್ಳಾಲ: ಸಮುದ್ರದಲೆಗಳ ಹೊಡೆತಕ್ಕೆ ಸಿಲುಕಿದ ಪ್ರದೇಶಗಳಿಗೆ ಸಚಿವ ಖಾದರ್ ಭೇಟಿ

ಉಳ್ಳಾಲ, ಡಿ.3: ಒಖಿ ಚಂಡಮಾರುತದ ಪ್ರಭಾವಕ್ಕೊಳಗಾಗಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದರಿಂದ ಹಾನಿಗೀಡಾಗಿರುವ ಉಳ್ಳಾಲದ ಹಲವು ಪ್ರದೇಶಗಳಿಗೆ ಆಹಾರ ಸಚಿವ ಯು.ಟಿ.ಖಾದರ್ ಇಂದು ಬೆಳಗ್ಗೆ ಭೇಟಿ ನೀಡಿದರು.
ಸಮುದ್ರದ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ಆಸ್ತಿಪಾಸ್ತಿ ಹಾನಿಗೀಡಾಗಿರುವ ಉಳ್ಳಾಲ ಉಚ್ಚಿಲ, ಪೆರಿಬೈಲು, ಸಂಕೊಲಿಗೆ ಪ್ರದೇಶಗಳಲ್ಲಿ ಸಚಿವರು ಕಡಲಿನ ಅಬ್ಬರ, ಕಡಲ್ಕೊರೆತವನ್ನು ವೀಕ್ಷಿಸಿದರು. ಅಲೆಗಳ ಅಬ್ಬರಕ್ಕೆ ಸಿಲುಕಿ ಹಾನಿಗೀಡಾಗಿರುವ ಮನೆಗಳಿಗೆ ಭೇಟಿ ನೀಡಿದರು.
ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ಸಚಿವರು, ಚಂಡಮಾರುತದ ಪ್ರಭಾವದಿಂದ ಉಳ್ಳಾಲ ವ್ಯಾಪ್ತಿಯಲ್ಲಿ ಐದು ಮನೆಗಳಿಗೆ ಹಾನಿಯಾಗಿದೆ. ಸಾಕಷ್ಟು ತೆಂಗಿನಮರಗಳು ಸಮುದ್ರಪಾಲಾಗಿವೆ. ತೀರದ 35 ಕುಟುಂಬಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ. ಎಂದು ತಿಳಿಸಿದರು.
ಮನೆ, ಆಸ್ತಿ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ಕಡಲ್ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಎಡಿಬಿ 2 ಯೋಜನೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ ಎಂದ ಸಚಿವರು, ಉಚ್ಚಿಲ ಪೆರಿಬೈಲ್, ಸಂಕೊಲಿಗೆ, ಸೋಮೇಶ್ವರ ವ್ಯಾಪ್ತಿಯ ಜನರಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ ಎಂದು ಹೇಳಿದರು.
ಈ ನಡುವೆ ಈ ಪ್ರದೇಶದಲ್ಲಿ ಕಡಲು ಶಾಂತಗೊಂಡಿದ್ದರೂ, ಎಂದಿನ ಸ್ಥಿತಿಗೆ ಮರಳಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.





