ಕಾಡಾನೆ ದಾಳಿ: ಬೆಳೆ ನಾಶ
ಚಿಕ್ಕಮಗಳೂರು, ಡಿ.3: ತೋಟವೊಂದಕ್ಕೆ ದಾಳಿ ನಡೆಸಿದ ಕಾಡಾನೆಗಳು ಅಪಾರ ಪ್ರಮಾಣದ ಬೆಳೆಗೆ ಹಾನಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪದ ದೊಡ್ಡಿಬೀದಿ ಗ್ರಾಮದಲ್ಲಿ ಭಾನುವಾರ ನಸುಕಿನಲ್ಲಿ ನಡೆದಿದೆ.
ಮುತ್ತಿನಕೊಪ್ಪ ದೊಡ್ಡಿಬೀದಿಯ ರಮೇಶ್ ಮತ್ತು ಹಿದಾಯತ್ ಎಂಬವರಿಗೆ ಸೇರಿದ ತೋಟದಲ್ಲಿ ಕಾಡಾನೆ ದಾಳಿ ನಡೆದಿದೆ. ದಾಳಿಯಲ್ಲಿ ಕಾಡಾನೆಗಳು ಲಕ್ಷಾಂತರ ರೂ.ಗಳ ಮೌಲ್ಯದ ಅಡಿಕೆ ಗಿಡಗಳ ಸಹಿತ ಬಾಳೆ ಬೆಳೆ ನಾಶ ಮಾಡಿದೆ. ಇದರಿಂದ ಸುತ್ತಮುತ್ತಲ ನಾಗರಿಕರಲ್ಲಿ ಭೀತಿಯ ವಾತಾವರಣ ಮೂಡಿದೆ. ಕಾಡಾನೆಗಳು ಯಾವುದೇ ಕ್ಷಣದಲ್ಲೂ ದಾಳಿ ನಡೆಸುವ ಸಾದ್ಯೆತಗಳಿವೆ ಎಂದು ಸ್ಥಳೀಯರು ಭೀತಿ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಪ್ರತಿನಿತ್ಯ ಕಾಡಾನೆಗಳು ಬೆಳೆ ಹಾನಿ ಮಾಡುತ್ತಿದ್ದರೂ ಅರಣ್ಯಧಿಕಾರಿಗಳು ಯಾವುದೇ ಕ್ರಮ ಜರುಗಿಸದೇ ಮೌನವಾಗಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ. ಕಾಡಾನೆಗಳನ್ನು ಸ್ಥಳಾಂತರಿಸದ ಹೊರತು ರೈತರಿಗೆ ಶಾಶ್ವತ ಪರಿಹಾರ ದೊರಕದು. ಹೀಗಾಗಿ ಅರಣ್ಯಾಧಿಕಾರಿಗಳು ಬೆಳೆನಷ್ಟಕ್ಕೊಳಗಾಗುವ ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು. ಹಾಗೂ ಕಾಡಾನೆಗಳನ್ನು ತಕ್ಷಣ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಸ್ಥಳಕ್ಕೆ ಎನ್‍ಆರ್.ಪುರ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







