ಮೆಟ್ರೋ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಹುಸಿ ಬಾಂಬ್

ಹೈದರಾಬಾದ್,ಡಿ.3: ರವಿವಾರ ಬೆಳಗ್ಗೆ ಇಲ್ಲಿಯ ಅಮೀರಪೇಟ್ ಮೆಟ್ರೋ ರೈಲುನಿಲ್ದಾಣದಲ್ಲಿ ಪತ್ತೆಯಾದ ಅನಾಥ ಬ್ಯಾಗೊಂದು ಪೊಲೀಸರನ್ನು ಎರಡು ಗಂಟೆಗಳ ಕಾಲ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಬ್ಯಾಗ್ ಮೆಟ್ರೋದ ಉದ್ಯೋಗಿಯೋರ್ವನಿಗೆ ಸೇರಿದ್ದು ಎನ್ನುವದು ಗೊತ್ತಾದ ಬಳಿಕವೇ ಪೊಲೀಸರು ಬಿಡುಗಡೆಯ ನಿಟ್ಟುಸಿರು ಬಿಟ್ಟಿದ್ದಾರೆ.
ಅನಾಮಿಕ ವ್ಯಕ್ತಿಯೋರ್ವ ಎಸ್.ಆರ್.ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ಮೆಟ್ರೋ ರೈಲುನಿಲ್ದಾಣದಲ್ಲಿ ಸ್ಫೋಟಕಗಳಿಂದ ತುಂಬಿದ್ದ ಬ್ಯಾಗ್‌ನ್ನು ತಾನು ಗಮನಿಸಿದ್ದಾಗಿ ಮಾಹಿತಿ ನೀಡಿದ್ದ. ತಕ್ಷಣ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದೊಂದಿಗೆ ನಿಲ್ದಾಣಕ್ಕೆ ಧಾವಿಸಿದ ಪೊಲೀಸರು ಪ್ಲಾಟ್‌ಫಾರ್ಮ್‌ನಲ್ಲಿದ್ದ ಬ್ಯಾಗನ್ನು ಪರಿಶೀಲಿಸಿದಾಗ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಲಿಲ್ಲ. ಪೊಲೀಸರು ಇಡೀ ನಿಲ್ದಾಣದಲ್ಲಿಯೂ ಶೋಧ ಕಾರ್ಯ ನಡೆಸಿದ್ದರು.
ಬ್ಯಾಗ್ ಮೆಟ್ರೋ ಸಿಬ್ಬಂದಿಗೆ ಸೇರಿದ್ದು, ಆತ ಅದನ್ನು ಪ್ಲಾಟ್‌ಫಾರ್ಮ್‌ನಲ್ಲಿರಿಸಿ ನಿಲ್ದಾಣದಲ್ಲಿಯ ತನ್ನ ಕರ್ತವ್ಯಕ್ಕೆ ತೆರಳಿದ್ದ ಎನ್ನುವುದು ಸಿಸಿಟಿವಿ ಫೂಟೇಜ್ ಪರಿಶೀಲನೆಯಿಂದ ತಿಳಿದುಬಂದಿದೆ.





