19 ರೂಪಾಯಿಯ ನೀರಿನ ಬಾಟಲ್ 82 ರೂ.ಗೆ ಮಾರಾಟ
ಅಧಿಕಾರಿಗಳಿಂದ ಹೋಟೆಲ್ ಮೇಲೆ ದಾಳಿ

ಜಮ್ಮು, ಡಿ.3: ಕುಡಿಯುವ ನೀರಿನ ಬಾಟಲಿಯನ್ನು ಮುದ್ರಿತ ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಹೊಟೇಲ್‌ಗಳ ವಿರುದ್ಧ ಕಾನೂನಾತ್ಮಕ ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ಕತ್ರಾ ಪ್ರದೇಶದಲ್ಲಿ ನಡೆದಿದೆ.
ಗ್ರಾಹಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾನೂನಾತ್ಮಕ ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ನಗರದ ವಿವಿಧ ಹೊಟೇಲ್‌ಗಳು ಮತ್ತು ರೆಸ್ಟೊರೆಂಟ್‌ಗಳನ್ನು ಪರಿಶೀಲಿಸಿದ್ದರು. ಈ ವೇಳೆ ಪ್ರತಿಷ್ಠಿತ ಹೊಟೇಲ್‌ವೊಂದರಲ್ಲಿ ರೂ. 19 ಗರಿಷ್ಠ ಮಾರಾಟ ಬೆಲೆಯ ಒಂದು ಲೀಟರ್ ಕುಡಿಯುವ ನೀರಿನ ಬಾಟಲಿಯನ್ನು ರೂ. 82.60ಗೆ ಮಾರಾಟ ಮಾಡುತ್ತಿರುವುದು ಪತ್ತೆಯಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಟೇಲ್ ಒಳಗಿದ್ದ ಅಂಗಡಿಗಳಲ್ಲಿ ಕೂಡಾ ಒಣಹಣ್ಣುಗಳು ಮತ್ತು ಇತರ ವಸ್ತುಗಳನ್ನು 2011ರ ಪ್ಯಾಕ್ ಮಾಡಲಾದ ಸರಕುಗಳ ಕಾಯ್ದೆಯಡಿ ಅಗತ್ಯವಿರುವ ಕಡ್ಡಾಯ ಘೋಷಣೆಯನ್ನು ಮಾಡದೆಯೇ ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ರೂ. 19 ಬೆಲೆಯ ಕುಡಿಯುವ ನೀರಿನ ಬಾಟಲಿಯನ್ನು ರೂ. 59ಕ್ಕೆ ಮಾರುತ್ತಿದ್ದ ಇನ್ನೊಂದು ಹೊಟೇಲ್ ವಿರುದ್ಧವೂ ಅಧಿಕಾರಿಗಳು ಕ್ರಮ ಜರಗಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕಾನೂನಾತ್ಮಕ ಮಾಪನಶಾಸ್ತ್ರ ಕಾಯ್ದೆ ಮತ್ತು 2011ರ ಪ್ಯಾಕ್ ಮಾಡಲ್ಪಟ್ಟ ಸರಕುಗಳ ಕಾಯ್ದೆಯ ವಿವಿಧ ನಿಬಂಧನೆಗಳನ್ನು ಉಲ್ಲಂಘಿಸಿರುವ ಕಾರಣಕ್ಕಾಗಿ ಹೊಟೇಲ್‌ಗಳಿಗೆ ನೊಟೀಸ್ ಜಾರಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.







