ರಾಜ್ಯ ಮಟ್ಟದ ಪ.ಪೂ.ಕಾಲೇಜು ಹಾಕಿ ಪಂದ್ಯಾಟ
ಬಾಲಕರ ವಿಭಾಗದಲ್ಲಿ ಬೆಂಗಳೂರು-ದಕ್ಷಿಣ, ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ

ಪುತ್ತೂರು, ಡಿ. 3: ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಜ್ರ ಮಹೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶುಕ್ರವಾರದಿಂದ ಭಾನುವಾರ ತನಕ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಬೆಂಗಳೂರು-ದಕ್ಷಿಣ ಮತ್ತು ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಸಮಗ್ರ ಪ್ರಶಸ್ತಿ ಪಡೆದು ಕೊಂಡಿವೆ.
25 ತಂಡಗಳು ಪಾಲ್ಗೊಂಡಿದ್ದ ಬಾಲಕರ ವಿಭಾಗದ ಫೈನಲ್ ಪಂದ್ಯಾಟದಲ್ಲಿ ಬೆಂಗಳೂರು-ದಕ್ಷಿಣ ತಂಡವು ಬೆಂಗಳೂರು ಉತ್ತರ ತಂಡವನ್ನು 1-0 ಗೋಲಿನ ಅಂತರದಲ್ಲಿ ಸೋಲಿಸಿ ಸಮಗ್ರ ಪ್ರಶಸ್ತಿ ಪಡೆದಿದೆ. ಬೆಂಗಳೂರು-ಉತ್ತರ ತಂಡವು ದ್ವಿತೀಯ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿದೆ. 19 ತಂಡಗಳಿದ್ದ ಬಾಲಕಿಯರ ವಿಭಾಗದಲ್ಲಿ ಫೈನಲ್ ಪಂದ್ಯವು ಕೊಡಗು ಮತ್ತು ಮೈಸೂರು ತಂಡಗಳ ನಡುವೆ ನಡೆದಿದ್ದು, ಮೈಸೂರು ತಂಡವು 2-1 ಗೋಲುಗಳ ಅಂತರದಲ್ಲಿ ಕೊಡಗು ತಂಡವನ್ನು ಮಣಿಸಿ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದೆ. ಕೊಡಗು ತಂಡ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು.
ಬಾಲಕರ ವಿಭಾಗದಲ್ಲಿ ಮೈಸೂರು ತಂಡದ ಬೋಜಣ್ಣ ಬೆಸ್ಟ್ ಗೋಲ್ ಕೀಪರ್, ಬೆಂಗಳೂರು-ದಕ್ಷಿಣ ತಂಡದ ಜಯವಂತ್ ಬೆಸ್ಟ್ ಫೋರ್ವರ್ಡ್ ಪ್ಲೇಯರ್ ಮತ್ತು ಬೆಂಗಳೂರು-ಉತ್ತರ ತಂಡದ ಪ್ರಣಾಮ್ ಗೌಡ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಯನ್ನು ಪಡೆದರು. ಬಾಲಕಿಯರ ವಿಭಾಗದಲ್ಲಿ ಕೊಡಗು ತಂಡದ ಪ್ರಿಯದರ್ಶಿನಿ ಬೆಸ್ಟ್ ಗೋಲ್ ಕೀಪರ್, ಮೈಸೂರು ತಂಡದ ಅಂಜಲಿ ಬೆಸ್ಟ್ ಫೋರ್ವರ್ಡ್ ಪ್ಲೇಯರ್ ಮತ್ತು ಕೊಡಗು ತಂಡದ ಲಿಖಿತಾ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಯನ್ನು ಪಡೆದರು.
ಈ ಪಂದ್ಯಾಕೂಟದ ಅಂತಿಮ ದಿನವಾದ ಭಾನುವಾರ ನಡೆದ ಬಾಲಕರ ವಿಭಾಗದ ಪ್ರಥಮ ಸೆಮಿಫೈನಲ್ ಪಂದ್ಯಾಟವು ದಕ್ಷಿಣ ಕನ್ನಡ ಮತ್ತು ಬೆಂಗಳೂರು-ಉತ್ತರ ತಂಡಗಳ ನಡುವೆ ಹಾಗೂ ದ್ವಿತೀಯ ಸೆಮಿಫೈನಲ್ ಪಂದ್ಯಾಟವು ಶಿವಮೊಗ್ಗ ಮತ್ತು ಬೆಂಗಳೂರು-ದಕ್ಷಿಣ ತಂಡಗಳ ನಡುವೆ ನಡೆದಿದ್ದು, ಬೆಂಗಳೂರು-ಉತ್ತರ ಮತ್ತು ಬೆಂಗಳೂರು-ದಕ್ಷಿಣ ತಂಡಗಳು ಫೈನಲ್ ಪಂದ್ಯಾಟದಲ್ಲಿ ಆಡುವ ಅರ್ಹತೆಯನ್ನು ಪಡೆದುಕೊಂಡವು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸೆಮಿಫೈನಲ್ ಪಂದ್ಯಾಟ ಉಡುಪಿ ಮತ್ತು ಮೈಸೂರು ತಂಡಗಳ ನಡುವೆ ಹಾಗೂ ದ್ವಿತೀಯ ಸೆಮಿಫೈನಲ್ ಪಂದ್ಯಾಟ ದಕ್ಷಿಣ ಕನ್ನಡ ಮತ್ತು ಕೊಡಗು ತಂಡಗಳ ನಡುವೆ ನಡೆದಿದ್ದು, ಮೈಸೂರು ಮತ್ತು ಕೊಡಗು ತಂಡಗಳು ಫೈನಲ್ ಪಂದ್ಯಾಟದಲ್ಲಿ ಆಡುವ ಅರ್ಹತೆಯನ್ನು ಪಡೆದುಕೊಂಡಿದ್ದವು.







