2016ರಲ್ಲಿ ಮಾನವ ಕಳ್ಳಸಾಗಾಣಿಕೆಯ 8,132 ಪ್ರಕರಣಗಳು
ದಿನವೊಂದಕ್ಕೆ ಸರಾಸರಿ 63 ಸಂತ್ರಸ್ತರ ರಕ್ಷಣೆ

ಹೊಸದಿಲ್ಲಿ.ಡಿ.3: 2016ರಲ್ಲಿ ಭಾರತದಲ್ಲಿ ಒಟ್ಟು 8,132 ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ವರದಿಯಾಗಿದ್ದು, 182 ವಿದೇಶಿಯರು ಸೇರಿದಂತೆ 23,117 ಸಂತ್ರಸ್ತರನ್ನು ರಕ್ಷಿಸಲಾಗಿದೆ. ಪೊಲೀಸರು ಪ್ರತಿದಿನ 63 ಸಂತ್ರಸ್ತರನ್ನು ರಕ್ಷಿಸಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕವು ಇತ್ತೀಚಿಗೆ ಬಿಡುಗಡೆಗೊಳಿಸಿದ ತನ್ನ ವರದಿಯಲ್ಲಿ ತಿಳಿಸಿದೆ. 2015ರಲ್ಲಿ 6,877 ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ವರದಿಯಾಗಿವೆ.
ಸಂತ್ರಸ್ತರ ಪೈಕಿ 18 ವರ್ಷಕ್ಕಿಂತ ಕೆಳಗಿನ ವಯೋಮಾನದವರ ಸಂಖ್ಯೆ 9,034 ಆಗಿದೆ.
ಅತ್ಯಂತ ಹೆಚ್ಚಿನ ಮಾನವ ಕಳ್ಳ ಸಾಗಾಣಿಕೆ ಪ್ರಕರಣ(3,579)ಗಳು ಪಶ್ಚಿಮ ಬಂಗಾಳದಿಂದ ವರದಿಯಾಗಿದ್ದು, ನಂತರದ ಸ್ಥಾನಗಳಲ್ಲಿ ರಾಜಸ್ಥಾನ(1,422), ಗುಜರಾತ್(548), ಮಹಾರಾಷ್ಟ್ರ(517) ಮತ್ತು ತಮಿಳುನಾಡು(434) ರಾಜ್ಯಗಳಿವೆ.
2015ರಲ್ಲಿ ಮೊದಲ ಸ್ಥಾನದಲ್ಲಿದ್ದ ಅಸ್ಸಾಮಿನಲ್ಲಿ ಆ ವರ್ಷ 1,494 ಪ್ರಕರಣಗಳು ವರದಿಯಾಗಿದ್ದರೆ, 2016ರಲ್ಲಿ ಈ ಸಂಖ್ಯೆ ಗಣನೀಯವಾಗಿ ತಗ್ಗಿದ್ದು, ಕೇವಲ 91 ಪ್ರಕರಣಗಳು ವರದಿಯಾಗಿವೆ.
2016ರ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿರುವ ದಿಲ್ಲಿಯಲ್ಲಿ 66 ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ವರದಿಯಾಗಿವೆ.
ಅಪರಾಧ ದರ(ಪ್ರತಿ ಲಕ್ಷ ಜನಸಂಖ್ಯೆಗೆ ಅಪರಾಧಗಳ ಸಂಖ್ಯೆ)ದಲ್ಲಿ ಪ.ಬಂಗಾಳ ಮೊದಲ ಸ್ಥಾನದಲ್ಲಿದೆ. ರಕ್ಷಿಸಲ್ಪಟ್ಟ ವಿದೇಶಿಯರಲ್ಲಿ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ, ಥೈಲಂಡ್, ಉಝ್ಬೆಕಿಸ್ತಾನ್ ಮತು ಇತರ ರಾಷ್ಟ್ರಗಳ ಪ್ರಜೆಗಳು ಸೇರಿದ್ದಾರೆ.







