ರಾಜ್ಯೋತ್ಸವ ಪ್ರಶಸ್ತಿ ಮೂಲಕ ನನ್ನ ಬಾಯಿ ಮುಚ್ಚಿಸಲು ಹೊರಟ ಸರಕಾರ : ಡಾ. ರವೀಂದ್ರನಾಥ ಶಾನುಬಾಗ್

ತುಮಕೂರು,ಡಿ.03: ಸರಕಾರ ಪ್ರಶಸ್ತಿ ನೀಡಿ ನನ್ನ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಬಾಗ್ ತಿಳಿಸಿದ್ದಾರೆ.
ನಗರದ ಜಿಲ್ಲಾ ನಿವೃತ್ತರ ಮಹಾಮನೆಯಲ್ಲಿ ರವಿವಾರ ಮಾನವ ಹಕ್ಕುಗಳ ರಕ್ಷಣಾ ಘಟಕ, ಗುಬ್ಬಿ ಮಡಿಲು ಸೇವಾ ಟ್ರಸ್ಟ್ , ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಸಲಹಾ ಕೇಂದ್ರದಿಂದ ಆಯೋಜಿಸಿದ್ದ ಹಕ್ಕುಗಳ ಅರಿವು ಹಾಗೂ ಪರಿಸರ ರಕ್ಷಣೆ ಕಾರ್ಯಾಗಾರದಲ್ಲಿ ಮಾತನಾಡುತಿದ್ದ ಅವರು,ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಎಂಬುದು ಲೇಖಕರಿಗೆ, ಕ್ರೀಡಾಪಟುಗಳಿಗೆ, ಚಿತ್ರಕಲಾವಿದರಿಗೆ, ಯಕ್ಷಗಾನ ಪ್ರತಿಭೆಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಮಾಡಿರುವ ಸಾಧಕರನ್ನು ಗುರುತಿಸಿ ಸರಕಾರ ನೀಡುವ ಗೌರವ ಎಂದು ಅರ್ಥಮಾಡಿಕೊಂಡಿದ್ದೇನೆ.
ಸಮಾಜ ಸೇವಾ ವಿಭಾಗದಲ್ಲಿ ನನ್ನನ್ನು ಗುರುತಿಸಿರುವ ರಾಜ್ಯ ಸರಕಾರಕ್ಕೆ ನಾನು ಆಭಾರಿಯಾಗಿದ್ದೇನೆ.ನನ್ನ ಸಮಾಜ ಸೇವೆ ಸಾಕಷ್ಟು ನೊಂದವರಿಗೆ ತಲುಪಿದ ತೃಪ್ತಿ ನನಗಿಲ್ಲ.ನಾನು ಯಾರಿಗಾಗಿ ಹೋರಾಡುತ್ತಿದ್ದೇನೆಯೋ ಅವರಲ್ಲಿ ಸಾಕಷ್ಟು ಮಂದಿಗೆ ಇನ್ನೂ ನ್ಯಾಯ ಸಿಕ್ಕಿಲ.ನೂರಾರು ಹಿರಿಯ ಜೀವಿಗಳು ನನ್ನ ಮುಂದೆ ಕಣ್ಣಿರಿಡುತ್ತಿರುವಾಗ ನಾನು ಪ್ರಶಸ್ತಿ ಸ್ವೀಕರಿಸಿದರೆ ಫಲವೇನು ಎಂದು ಪ್ರಶ್ನಿಸಿದರು.
ಅನ್ಯಾಯಕ್ಕೊಳಗಾದ ಹಿರಿಯ ನಾಗರಿಕರ ದೂರುಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಸಮಾಜದಲ್ಲಿ ಹಿರಿಯ ನಾಗರಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಪ್ರಪಂಚ ಆಧುನೀಕರಣ ವ್ಯವಸ್ಥೆಯಲ್ಲಿ ಜಾರುತ್ತಿದ್ದರೂ ಅನ್ಯಾಯಕ್ಕೊಳಗಾಗುವ ಹಿರಿಯ ನಾಗರಿಕರಿಗೆ ನ್ಯಾಯ ಒದಗಿಸುವ ಕಾನೂನಿನ ಬಗ್ಗೆ ಅರಿವು ಮೂಡಿಲ್ಲ. ಪ್ರಸ್ತುತ ದಿನಗಳಲ್ಲಿ ಹಿರಿಯ ನಾಗರಿಕರು ತಮ್ಮ ಮಕ್ಕಳು, ಸಂಬಂಧಿಕರು, ಬಂಧುಗಳಿಂದಲೇ ಹೆಚ್ಚಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಕಾನೂನಿನ ಅರಿವು ಮೂಡಿಸುವ ಕಾರ್ಯಕ್ಕೆ ಸರಕಾರ ಮುಂದಾಗಬೇಕಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಶೇ.18 ರಷ್ಟು ಹಿರಿಯ ನಾಗರಿಕರಿದ್ದಾರೆ. ಅದರಲ್ಲಿ ಕೇವಲ ಶೇ.3ರಷ್ಟು ಮಂದಿ ಕ್ರಿಯಾಶೀಲರಾಗಿದ್ದಾರೆ.ಯಾವುದೆ ಕೆಲಸ ಆಗದಿದ್ದಾಗ ಅದರ ವಿರುದ್ಧ ಪ್ರತಿಭಟಿಸುವುದು ಸಮಂಜಸವಲ್ಲ.ಶಾಂತಿಯುತವಾಗಿ ಸತ್ಯಕ್ಕಾಗಿ ಆಗ್ರಹಿಸಿ ತಮ್ಮ ಕಾರ್ಯದಲ್ಲಿ ಯಶಸ್ಸು ಕಾಣಬೇಕು.ಒಂದು ಕೆಲಸ ಆಗಬೇಕಾದರೆ ನೂರಾರು ಸಮಸ್ಯೆಗಳು ಎದುರಾಗುತ್ತವೆ. ಆದರೆ ನಮ್ಮ ಕೆಲಸ ಮುಗಿಯುವವರೆಗೂ ಆಗ್ರಹಿಸಬೇಕಾಗಿದೆ. ಅನ್ಯ ದಾರಿಯನ್ನು ತುಳಿಯದೆ ತನ್ನ ದಾರಿಯಲ್ಲಿ ತಾನೇ ಸತ್ಯಕ್ಕಾಗಿ ಆಗ್ರಹಿಸಬೇಕು. ಯಾವುದಕ್ಕೂ ಹಿಂಜರಿಯಬಾರದು ಎಂದು ನುಡಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಹಾಗೂ ಬೀರೂರಿನ ಮುನ್ನೂರಕ್ಕೂ ಹೆಚ್ಚು ಅಂಗನವಾಡಿ ಶಿಕ್ಷಕಿಯರು ತಮ್ಮ ಯಾವುದೇ ತಪ್ಪಿಲ್ಲದೆ. ಎಲ್‍ಐಸಿಯಿಂದ ಮೋಸ ಹೋಗಿ ಲಕ್ಷಾಂತರ ರೂ.ಗಳಿಂದ ವಂಚಿತರಾಗಿದ್ದಾರೆ. ಹೀಗೆ ಅನ್ಯಾಯಕ್ಕೊಳಗಾಗಿ ನಿತ್ಯ ನೂರಾರು ನೊಂದ ಮಹಿಳೆಯರು, ಹಿರಿಯ ಜೀವಿಗಳು ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ. ನನ್ನ ಬಳಿ ಬಂದು ಕಣ್ಣೀರಿಡುತ್ತಾರೆ. ಆದರೆ ಸರಕಾರ ಹಿರಿಯ ನಾಗರಿಕರ ಕಾನೂನನ್ನು ಪಾಲಿಸದೆ ಗಾಳಿಗೆ ತೂರಿದೆ. ಜನಪ್ರತಿನಿಗಳಿಗೆ, ಅಧಿಕಾರಿಗಳಿಗೆ ಹಿರಿಯ ಜೀವಿಗಳ ಅನ್ಯಾಯವನ್ನಾದರೂ ಕಂಡು ಜ್ಞಾನೋದಯವಾಗಬೇಕಾಗಿದೆ ಎಂದು ಡಾ.ರವೀಂದ್ರ ಶಾನುಭೋಗ್ ತಿಳಿಸಿದರು.
ಪ್ರಪಂಚದಲ್ಲಿನ ಪ್ರತಿಯೊಬ್ಬರೂ ಮಾರ್ಗದರ್ಶಕರಾಗಬೇಕು.ಯಾರೂ ಎತ್ತರಕ್ಕೆ ಬೆಳೆದಿರುವವನ್ನು ತೋರಿಸಿ ಇವರೇ ನಿನ್ನ ಮಾರ್ಗದರ್ಶಕರು ಎನ್ನುವ ಬದಲು ಮನೆಯಲ್ಲಿನ ತಂದೆ ಮಗನಿಗೆ, ತಾಯಿ ಮಗಳಿಗೆ ಹೀಗೆ ಮನೆಯಲ್ಲಿನ ಮಂದಿಯೇ ಮನೆಯವರಿಗೆ ಮಾರ್ಗದರ್ಶನವಾಗಬೇಕು. ಆಗಾದಾಗ ಮಾತ್ರವೇ ಸಮಾಜದಲ್ಲಿ ಅನ್ಯಾಯದ ಸಂಖ್ಯೆ ಕ್ಷೀಣಿಸುತ್ತದೆ. ಯಾವತ್ತೂ ಬೇಡುವವನಾಗಬಾರದು ದುಡಿಯುವವನಾಗಬೇಕು. ಇನ್ನೊಬ್ಬರಿಗೆ ಕೊಡುವವನಾಗಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಡಿಲು ಗುಬ್ಬಿ ಸೇವಾ ಸಂಸ್ಥೆಯ ಶಾಮಣ್ಣಕುಮಾರ್, ಕಸಾಪ ಅಧ್ಯಕ್ಷೆ ಬಾ. ಹಾ. ರಮಾಕುಮಾರಿ, ಜಿಲ್ಲಾ ನಿವೃತ್ತ ನೌಕಕರ ಸಂಘದ ಅಧ್ಯಕ್ಷ ಮಹದೇವ್ ಬೊಬಡೆ ಇನ್ನಿತರರಿದ್ದರು.







