2018ರ ಮಾರ್ಚ್ ವೇಳೆ ಬಯಲು ಬಹಿರ್ದೆಸೆಮುಕ್ತ ಕರ್ನಾಟಕ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಡಿ.3: ಕರ್ನಾಟಕವನ್ನು ಮುಂದಿನ 2018ರ ಮಾರ್ಚ್‌ಗೆ ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರವಿವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಗರದ ಆನಂದ ವೃತ್ತದಲ್ಲಿರುವ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ಗ್ರಾಮೀಣಾಭಿವೃದ್ಧಿ ಭವನ-2’ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬಹಿರ್ದೆಸೆಗಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು ಪಡುತ್ತಿರುವ ಪಾಡು ಹೇಳ ತೀರದಾಗಿದೆ. ಬಹಿರ್ದೆಸೆಯನ್ನು ಪೂರೈಸಲು ರಾತ್ರಿಯಾಗುವುದನ್ನೇ ಕಾಯುವ ಮಹಿಳೆಯರು ಹಲವು ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಿಂದ ಗ್ರಾಮೀಣ ಪ್ರದೇಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕಳೆದ ನಾಲ್ಕೂವರೆ ವರ್ಷದಿಂದ ನಮ್ಮ ಸರಕಾರ ಶ್ರಮವಹಿಸುತ್ತಿದ್ದು, 2018ರ ಮಾರ್ಚ್ ವೇಳೆಗೆ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗುವ ಮೂಲಕ ದೇಶಕ್ಕೆ ಮಾದರಿಯಾಗಲಿದೆ ಎಂದು ಅವರು ಹೇಳಿದರು.
ಇಡೀ ದೇಶದಲ್ಲೇ ಮಾದರಿ ಎಂಬುವಂತೆ ಗ್ರಾಮೀಣ ಪ್ರದೇಶದಲ್ಲಿ 10,100 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಜನರು ಆರೋಗ್ಯಯುತವಾದ ಜೀವನಕ್ಕೆ ಬಹುಮುಖ್ಯ ಶುದ್ಧವಾದ ನೀರು. ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕೆಆರ್‌ಐಡಿಎಲ್ ದಕ್ಷತೆ ಕಾಪಾಡಲಿ: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ(ಕೆಆರ್‌ಐಡಿಎಲ್)ಗೆ 2ಕೋಟಿ ರೂ.ಗೆ ಸೀಮಿತವಾಗಿದ್ದ ಟೆಂಡರ್ ರಹಿತ ಕಾಮಗಾರಿಗಳ ಅನುದಾನವನ್ನು 5ಕೋಟಿ ರೂ.ಗೆ ಹೆಚ್ಚಳ ಮಾಡಲಾಗುವುದು. ಇದನ್ನು ಬಳಸಿಕೊಂಡು ರಸ್ತೆ, ಕಟ್ಟಡಗಳ ಕಾಮಗಾರಿಯನ್ನು ಪಾರದರ್ಶಕವಾಗಿ, ದಕ್ಷತೆಯಿಂದ ಕೆಲಸ ನೆರವೇರಿಸಬೇಕು ಎಂದು ಅವರು ಸೂಚಿಸಿದರು.
ಕೆಆರ್‌ಐಡಿಎಲ್‌ಗೆ ಟೆಂಡರ್ ಇಲ್ಲದೆ 5ಕೋಟಿ ರೂ.ನೀಡುವುದರಿಂದ ಕಾಮಗಾರಿ ವೇಗ, ದಕ್ಷತೆಯಿಂದ ನಡೆಸಬೇಕು ಹಾಗೂ ಖಾಸಗಿ ಗುತ್ತಿಗೆದಾರರಿಗೆ ಮಾದರಿಯಾಗಿ ಕಾಮಗಾರಿಗಳನ್ನು ನಡೆಸಬೇಕು. ಆ ಮೂಲಕ ಸರಕಾರಿ ಸಂಸ್ಥೆಯೊಂದರ ಮೇಲೆ ಜನತೆಗೆ ವಿಶ್ವಾಸ ಮೂಡಿಸುವಂತೆ ಮಾಡಬೇಕು ಎಂದು ಅವರು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಕೆಆರ್‌ಐಡಿಎಲ್ ಸಂಸ್ಥೆಯಲ್ಲಿ 800ಮಂದಿ ಖಾಯಂ ಹಾಗೂ 800ಮಂದಿ ಗುತ್ತಿಗೆ ನೌಕರರಿದ್ದಾರೆ. ಇವರೆಲ್ಲರ ದಕ್ಷತೆ ಹಾಗೂ ಪಾರದರ್ಶಕ ಕೆಲಸದಿಂದಾಗಿ ಈಗಾಗಲೆ ಕೆಆರ್‌ಐಡಿಎಲ್ ಸಂಸ್ಥೆ ನಿವ್ವಳ ಲಾಭದೊಂದಿಗೆ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಇಲಾಖೆಗೆ ಸಂಬಂಧಿಸಿದ ಎಲ್ಲ ಕಚೇರಿಗಳು ಒಂದೇ ಸೂರಿನಡಿ ತರುವ ಉದ್ದೇಶದಿಂದ 'ಗ್ರಾಮೀಣಾಭಿವೃದ್ಧಿ ಭವನ-2'ನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಜನತೆಯ ಕೆಲಸ ಕಾರ್ಯಗಳು ಯಾವುದೇ ಗೊಂದಲವಿಲ್ಲದೆ, ವೇಗವಾಗಿ ನಡೆಯಲಿದೆ. ಹೀಗಾಗಿ ಮುಂದಿನ ಒಂದು ವರ್ಷದಲ್ಲಿ ಗ್ರಾಮೀಣಾಭಿವೃದ್ಧಿ ಭವನ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜಶೇಖರ್ ಜಿ.ಪಾಟೀಲ, ಪಂಚಾಯತ್ ಸರಕಾರ ಪ್ರಧಾನ ಕಾರ್ಯದರ್ಶಿ ಡಾ.ಎನ್.ನಾಗಾಂಬಿಕಾ ದೇವಿ ಮತ್ತಿತರರಿದ್ದರು.







