ಪ್ರಧಾನಿ ಮೋದಿಯ ಅಭಿವೃದ್ಧಿ ಹುಸಿ : ದೀಪಾಂಕರ ಭಟ್ಟಾಚಾರ್ಯ

ಬೆಂಗಳೂರು, ಡಿ.3: ಪ್ರಧಾನಿ ನರೇಂದ್ರ ಮೋದಿಯ ಅಭಿವೃದ್ಧಿ ಮಂತ್ರ ಹುಸಿಯಾಗಿದ್ದು, ದೇಶದೆಲ್ಲೆಡೆ ಶೋಷಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದು ಸಿಪಿಐ ಎಂಎಲ್ (ಲಿಬರೇಶನ್) ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ದೀಪಾಂಕರ ಭಟ್ಟಾಚಾರ್ಯ ಆರೋಪಿಸಿದ್ದಾರೆ.
ನಗರದ ಕಾಕ್ಸ್‌ಟೌನ್‌ನ ಕಾಂ.ಜೆ.ಶಂಕರ್ ಸಭಾಂಗಣದಲ್ಲಿ ಸಿಪಿಐ ಎಂಎಲ್ (ಲಿಬರೇಶನ್) ಪ್ರಥಮ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ನೋಟು ಅಮಾನ್ಯೀಕರಣ, ಜಿಎಸ್‌ಟಿ ವಿಫಲಗೊಂಡಿದೆ.ಆದರೂ, ಪ್ರಧಾನಿ ನರೇಂದ್ರ ಮೋದಿ ದೇಶ ಅಭಿವೃದ್ಧಿ ಆಗುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಸಂಘಪರಿವಾರ ನಡೆಸುತ್ತಿರುವ ಕೋಮುವಾದದ ದೌರ್ಜನ್ಯಗಳು ಬಹಿರಂಗಗೊಂಡಿವೆ ಎಂದ ಅವರು, ಕಾರ್ಪೊರೇಟ್ ಪರವಾಗಿ, ಜನರ ವಿರುದ್ಧವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೆಲಸ ಮಾಡುತ್ತಿವೆ.ಹೀಗಾಗಿ, ಜನರನ್ನು ಜಾಗೃತಗೊಳಿಸಲು ನಮ್ಮ ಪಕ್ಷ ಮುಂದಾಗಬೇಕು ಎಂದು ಕರೆ ನೀಡಿದರು.
ಸಮ್ಮೇಳನದಲ್ಲಿ ಕರ್ನಾಟಕದ ರಾಜಕೀಯ ಪರಿಸ್ಥಿತಿ ಮತ್ತು ನಮ್ಮ ಪ್ರತಿಕ್ರಿಯೆ, ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆ-ಪುನರ್ ಮನನ ಮತ್ತು ಕ್ರಿಯಾ ಯೋಜನ ಕುರಿತು ವರದಿ ಸಲ್ಲಿಸಲಾಯಿತು. ಪಕ್ಷದ ರಾಜ್ಯ ಸಮಿತಿಯ ಚುನಾವಣೆಯಲ್ಲಿ 27 ಸದಸ್ಯರು ಆಯ್ಕೆಯಾಗಿದ್ದು, ಕ್ಲಿಫ್ಟನ್ ಡಿ ರೊಜಾರಿಯೋ ಅವರು ಸಿಪಿಐ ಎಂಎಲ್ (ಲಿಬರೇಶನ್) ರಾಜ್ಯ ಕಾರ್ಯದರ್ಶಿಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







