ರೈಲ್ವೇ ಸಬ್ಸಿಡಿ ಕೈಬಿಟ್ಟ 9 ಲಕ್ಷ ಹಿರಿಯ ನಾಗರಿಕರು: ಸರಕಾರಕ್ಕೆ ಉಳಿತಾಯವಾದ ಹಣ ಎಷ್ಟು ಕೋಟಿ ಗೊತ್ತೇ?

ಹೊಸದಿಲ್ಲಿ, ಡಿ.3: ರೈಲ್ವೇ ಇಲಾಖೆಯ ಗಿವ್ ಅಪ್ (ಕೈಬಿಡಿ) ಯೋಜನೆಯಡಿ ಒಂಬತ್ತು ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರು ರೈಲ್ವೇ ಸಬ್ಸಿಡಿಯನ್ನು ಕೈಬಿಟ್ಟ ಪರಿಣಾಮ ಸರಕಾರವು ರೂ. 40 ಕೋಟಿ ಉಳಿತಾಯ ಮಾಡಿದೆ.
ಕಳೆದ ವರ್ಷ ಪರಿಚಯಿಸಲಾದ ಈ ಯೋಜನೆಯಲ್ಲಿ ಹಿರಿಯ ನಾಗರಿಕರು ರೈಲು ಟಿಕೆಟ್‌ಗಳಲ್ಲಿ ತಮಗೆ ಒದಗಿಸಲಾಗಿರುವ ಸಂಪೂರ್ಣ ರಿಯಾಯಿತಿಯನ್ನು ಪಡೆದುಕೊಳ್ಳುವ ಅಥವಾ ಸಂಪೂರ್ಣ ಮೊತ್ತವನ್ನು ಕೈಬಿಡುವ ಅವಕಾಶವನ್ನು ನೀಡಲಾಗಿತ್ತು. ಈ ವರ್ಷ ಇದಕ್ಕೊಂದು ಹೊಸ ನಿಬಂಧನೆಯನ್ನು ಸೇರಿಸಿ, ಹಿರಿಯ ನಾಗರಿಕರು ಶೇಕಡಾ 50 ರಿಯಾಯಿತಿಯನ್ನು ಕೈಬಿಡುವ ಅವಕಾಶವನ್ನು ನೀಡಲಾಯಿತು.
ರೈಲ್ವೇ ಇಲಾಖೆಯ ಮೇಲೆ ಹಿರಿಯ ನಾಗರಿಕರ ವಿಭಾಗದಡಿಯಿರುವ ರೂ. 1300 ಕೋಟಿ ಸಬ್ಸಿಡಿಯ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಜುಲೈ 22ರಿಂದ ಅಕ್ಟೋಬರ್ 22ರ ವೇಳೆಗೆ 2.16 ಲಕ್ಷ ಪುರುಷರು ಮತ್ತು 2.67 ಲಕ್ಷ ಮಹಿಳೆಯರು ತಮ್ಮ ಸಂಪೂರ್ಣ ಸಬ್ಸಿಡಿಯನ್ನು ಕೈಬಿಟ್ಟಿದ್ದಾರೆ. 2.51 ಲಕ್ಷ ಪುರುಷರು ಮತ್ತು 2.05 ಲಕ್ಷ ಮಹಿಳೆಯರು ಶೇಕಡಾ 50 ಸಬ್ಸಿಡಿಯನ್ನು ತ್ಯಜಿಸಿದ್ದಾರೆ. ಹಾಗಾಗಿ ಮೂರು ತಿಂಗಳಲ್ಲಿ ಸಬ್ಸಿಡಿಯನ್ನು ತೊರೆದಿರುವ 60ಕ್ಕೂ ಮೇಲ್ಪಟ್ಟ ವಯಸ್ಸಿನ ಪ್ರಯಾಣಿಕರ ಸಂಖ್ಯೆ 9.39 ಲಕ್ಷಕ್ಕೆ ತಲುಪಿದೆ.
ಕಳೆದ ವರ್ಷ ಇದೇ ವೇಳೆಗೆ ಕೇವಲ 4.68 ಲಕ್ಷ ಹಿರಿಯ ನಾಗರಿಕರು ಸಬ್ಸಿಡಿಯನ್ನು ಕೈಬಿಟ್ಟಿದ್ದರು. ಈ ಪೈಕಿ 2.35 ಲಕ್ಷ ಪುರುಷರು ಮತ್ತು 2.33 ಲಕ್ಷ ಮಹಿಳೆಯರಾಗಿದ್ದರು. ಅಂಕಿಂಶಗಳ ಪ್ರಕಾರ ಕಳೆದ ಒಂದು ವರ್ಷದಲ್ಲಿ ಸಬ್ಸಿಡಿಯನ್ನು ಕೈಬಿಡುವ ಹಿರಿಯ ನಾಗರಿಕರ ಸಂಖ್ಯೆ ದುಪ್ಪಟ್ಟಾಗಿದೆ. ಸಬ್ಸಿಡಿಯಿಂದ ಉಂಟಾಗುತ್ತಿರುವ ನಷ್ಟವನ್ನು ಭರಿಸಲು ಪ್ರಯತ್ನಿಸುತ್ತಿರುವ ರೈಲ್ವೇ ಇಲಾಖೆಗೆ ಇದು ಸಂತಸದ ವಿಷಯವಾಗಿದೆ ಎಂದು ರೈಲ್ವೇ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಪ್ರಸ್ತುತ ರೈಲ್ವೇಯು ಟಿಕೆಟ್‌ದರದ ಶೇಕಡಾ 43ನ್ನು ಭರಿಸುತ್ತಿದ್ದು ಇದರಿಂದ ವಾರ್ಷಿಕ ರೂ. 30,000 ಕೋಟಿ ನಷ್ಟವನ್ನು ಅನುಭವಿಸುತ್ತಿದೆ. ಇದರಲ್ಲಿ ದರ ರಿಯಾಯಿತಿಯಿಂದ ಉಂಟಾಗುತ್ತಿರುವ ನಷ್ಟವೇ ರೂ. 1,600 ಕೋಟಿಯಾಗಿದೆ. ಪ್ರಯಾಣಿಕರ ಸಾಗಾಟಕ್ಕೆ ತಗುಲುವ ವೆಚ್ಚದ ಕೇವಲ ಶೇಕಡಾ 57ನ್ನು ಮಾತ್ರ ರೈಲ್ವೇ ಇಲಾಖೆಯು ಟಿಕೆಟ್ ಮಾರಾಟದ ಮೂಲಕ ಪಡೆದುಕೊಳ್ಳುತ್ತಿದೆ.







