ಮೈಸೂರು ಪೇಟಾ ತೊಡದೆ ಚಂಪಾ ಅವಮಾನಿಸಿದ್ದಾರೆ ಎಂದು ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ

ಮೈಸೂರು,ಡಿ.3: ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಹಾಗೂ ಸಾಹಿತಿ ಚಂಪಾ ಮೈಸೂರು ಪೇಟವನ್ನು ತೊಡದೆ ಅವಮಾನಿಸಿದ್ದಾರೆ ಹಾಗೂ ಸಾಹಿತ್ಯ ಸಮ್ಮೇಳನದ ವಿಫಲವಾಗಿದೆ ಎಂದು ಆರೋಪಿಸಿ ಮೈಸೂರಿನಲ್ಲಿ ಕನ್ನಡ ಚಳುವಳಿ ಮುಖಂಡ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಕನ್ನಡ ಚಳುವಳಿ ಮುಖಂಡ ವಾಟಾಳ್ ನಾಗರಾಜ್ ರವಿವಾರ ಮೈಸೂರು ಪೇಟ ಧರಿಸಿಕೊಂಡು, ಕುದುರೆ ಸಾರೋಟವನ್ನೇರಿ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಿದರು. ಮೈಸೂರು ಅರಮನೆಯ ಆವರಣದಲ್ಲಿರುವ ಭುವನೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕುದುರೆ ಸಾರೋಟವನ್ನೇರಿ ಸಾಗಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಚಂಪಾ ಅವರು ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಾಲದ ಒಳಗೆ ಪ್ರವೇಶಿಸದೆ ಇರುವುದು ಹಾಗೂ ಮೈಸೂರು ಪೇಟಾವನ್ನು ತೊಡದೆ ಅಪಮಾನಿಸಿದ್ದಾರೆ ಎಂದು ಆರೋಪಿಸಿದರು.
ಈಗ ಇರುವ ಕನ್ನಡ ಧ್ವಜವನ್ನೇ ಅಧಿಕೃತಗೊಳಿಸಬೇಕು. ಧ್ವಜದ ವಿನ್ಯಾಸ ಬದಲಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು. ಇತ್ತೀಚೆಗೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಸಂಪೂರ್ಣ ವಿಫಲವಾಗಿದೆ. ಸಮ್ಮೇಳನಾಧ್ಯಕ್ಷರಾಗಿದ್ದ ಚಂಪಾ ಮೈಸೂರು ಪೇಟಕ್ಕೆ ಅಪಮಾನ ಮಾಡಿದ್ದಾರೆ. ಮೈಸೂರು ರಾಜಮನೆತನದ ಯಾರೊಬ್ಬರಿಗೂ ಆಹ್ವಾನ ನೀಡದೆ ಅಪಮಾನ ಮಾಡಲಾಗಿದೆ ಎಂದು ವಾಟಾಳ್ ನಾಗರಾಜ್ ಹರಿಹಾಯ್ದರು.







