ಗುಜರಾತ್ ಚುನಾವಣೆ: ಸಂಬಂಧ ಬದಿಗೊತ್ತಿ ಸ್ಪರ್ಧೆಗೆ ನಿಂತ ಭಾವಂದಿರು !

ರಾಜ್‌ಕೋಟ್, ಡಿ. 3: ಗುಜರಾತ್‌ನಲ್ಲಿ ಚುನಾವಣೆಯ ಕಾವು ಏರುತ್ತಿರುವಂತೆಯೇ ಇಲ್ಲಿನ ಕುಟುಂಬವೊಂದರಲ್ಲೂ ಚುನಾವಣೆಯ ಬಿಸಿ ಜೋರಾಗಿ. ಇಲ್ಲಿನ ಕುಟುಂಬವೊಂದರ ಇಬ್ಬರು ಸದಸ್ಯರು ವಿರುದ್ಧ ಪಕ್ಷಗಳ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದು, ಪಕ್ಷಕ್ಕಾಗಿ ಸಂಬಂಧವನ್ನು ಬದಿಗೊತ್ತಿದ್ದಾರೆ.
ಜಯ್‌ಸುಖ್ ಕಕಡಿಯಾ ಅಮರೇಲಿ ಜಿಲ್ಲೆಯ ಧರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದರೆ ಅವರ ಭಾವ ಕಮಲೇಶ್ ಕನನಿ ದೇ ಜಿಲ್ಲೆಯ ಸವರ್‌ಕುಂಡ್ಲ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಇಬ್ಬರ ಪತ್ನಿಯರು ಪರಸ್ಪರ ಸಹೋದರಿಯರಾಗಿದ್ದಾರೆ.
ಕಳೆದ 20 ವರ್ಷಗಳಿಂದ ಕಾಂಗ್ರೆಸ್‌ಗಾಗಿ ದುಡಿದಿರುವ ಕಾರಣ ನಾನು ಸ್ಪರ್ಧಿಸುತ್ತಿರುವುದು ನ್ಯಾಯಯುತವಾಗಿದೆ ಎಂದು ಜಯ್‌ಸುಖ್ ತಿಳಿಸುತ್ತಾರೆ. ಇದೇ ಮಾತನ್ನು ಅವರ ಭಾವ ಬಿಜೆಪಿ ಅಭ್ಯರ್ಥಿ ಕಮಲೇಶ್ ಕೂಡಾ ಹೇಳುತ್ತಾರೆ.
ನಿಮ್ಮ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರಲ್ಲಾ ಎಂದು ಕೇಳಿದರೆ, ನಾನು ಜನರ ಸೇವೆ ಮಾಡಬೇಕು ಅದನ್ನು ನನ್ನ ಪಕ್ಷದ ಮುಖಾಂತರವೇ ಮಾಡಬೇಕು ಎಂದು ಜಯ್‌ಸುಖ್ ನುಡಿಯುತ್ತಾರೆ. ಜೊತೆಗೆ ನನ್ನ ಬೆಂಬಲಕ್ಕೆ ಪ್ರಮಾಣಿಕ ಮತದಾರರಿದ್ದಾರೆ. ಹಾಗಾಗಿ ರಾಜಕೀಯವನ್ನು ಮನೆಗೆ ತರುವ ಅಗತ್ಯವಿಲ್ಲ. ನಾವು ಅದನ್ನು ಪ್ರತ್ಯೇಕವಾಗಿಟ್ಟಿದ್ದೇವೆ ಎಂದವರು ವಿವರಿಸುತ್ತಾರೆ. ತನ್ನ ಕ್ಷೇತ್ರದಲ್ಲಿ ತನ್ನ ಪರ 75,000 ಜನರು ಮತ ಚಲಾಯಿಸಲಿದ್ದಾರೆ ಎಂದೂ ಅವರು ಭವಿಷ್ಯ ನುಡಿಯುತ್ತಾರೆ.
ಚುನಾವಣಾ ಆಯೋಗದ ಜಾಲತಾಣದ ಪ್ರಕಾರ ಧರಿ ವಿಧಾನಸಭಾ ಕ್ಷೇತ್ರದಲ್ಲಿ 2,11,845 ಮತದಾರರಿದ್ದಾರೆ. ಕಮಲೇಶ್ ಪಾಟಿದಾರ್ ಸಮುದಾಯಕ್ಕೆ ಸೇರಿದವರಲ್ಲವಾದರೂ ತನ್ನ ಶ್ರಮ ಮತ್ತು ನಿಷ್ಠೆಗಾಗಿ ಪಕ್ಷವು ಈ ಕ್ಷೇತ್ರದಿಂದ ಟಿಕೆಟ್ ನೀಡಿರುವುದಾಗಿ ತಿಳಿಸುತ್ತಾರೆ. ನಾವು ಭಾವಂದಿರು ಹೌದು. ನಮ್ಮ ರಾಜಕೀಯ ಸಂಬಂಧ ಕೂಡಾ ಜನರಿಗೆ ಹಾಗೂ ಪಕ್ಷದ ಹಿರಿಯರಿಗೆ ತಿಳಿದಿದೆ ಎಂದು ಕಮಲೇಶ್ ತಿಳಿಸುತ್ತಾರೆ. ನಾವು ಸಂಬಂಧಿಕರಾಗಿದ್ದರೂ ಬೇರೆಬೇರೆ ಪಕ್ಷಗಳ ಅಭ್ಯರ್ಥಿಗಳಾಗಿರುವ ಮಾತ್ರಕ್ಕೆ ನಮ್ಮ ನಿಷ್ಠೆಯನ್ನು ಪ್ರಶ್ನಿಸುವಂತಿಲ್ಲ ಎಂದವರು ತಿಳಿಸುತ್ತಾರೆ.
ಚುನಾವಣಾ ಆಯೋಗದ ಜಾಲತಾಣದ ಪ್ರಕಾರ ಸಾವರ್‌ಕುಂಡ್ಲ ವಿಧಾನಸಭಾ ಕ್ಷೇತ್ರದಲ್ಲಿ 2,38,315 ಮತದಾರರಿದ್ದಾರೆ. ಅಮರೆಲಿಯಲ್ಲಿ ಡಿಸೆಂಬರ್ 9ಕ್ಕೆ ಚುನಾವಣೆ ನಡೆಯಲಿದೆ. ಗುಜರಾತ್‌ನಲ್ಲಿ 182 ವಿಧಾನಸಭಾ ಸ್ಥಾನಗಳಿಗೆ ಡಿಸೆಂಬರ್ 9 ಮತ್ತು 14ಕ್ಕೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 14ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.







