ಫಡ್ನವೀಸ್ ಸರಕಾರವನ್ನು ಟೀಕಿಸಿದ ಬಿಜೆಪಿ ಟ್ವೀಟ್ ವೈರಲ್
ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದ ಪಕ್ಷ

ಮುಂಬೈ,ಡಿ.3: ಉದ್ಯೋಗ ಕೊರತೆ ಕುರಿತು ರಾಜ್ಯದ ದೇವೇಂದ್ರ ಫಡ್ನವೀಸ್ ಸರಕಾರವನ್ನು ಕಟುವಾಗಿ ಟೀಕಿಸಿದ ಟ್ವೀಟ್ ರವಿವಾರ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಪೋಸ್ಟ್ ಆಗಿರುವುದು ಮಹಾರಾಷ್ಟ್ರ ಬಿಜೆಪಿಯನ್ನು ತೀವ್ರ ಮುಜುಗರದಲ್ಲಿ ಸಿಲುಕಿಸಿದೆ. ತನ್ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದಿರುವ ಅದು ಈ ಬಗ್ಗೆ ಪೊಲೀಸ್ ತನಿಖೆಯನ್ನು ಕೋರಿದೆ.
ಉದ್ಯೋಗ ಸೃಷ್ಟಿ ಕುರಿತು ಮತ್ತು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ.30ರಷ್ಟು ಕಡಿತ ಮಾಡಿರುವುದಕ್ಕಾಗಿ ಮಹಾರಾಷ್ಟ್ರ ಸರಕಾರವನ್ನು ಟೀಕಿಸಿರುವ ಟ್ವೀಟ್‌ನ್ನು ತಕ್ಷಣವೇ ಅಳಿಸಲಾಗಿದೆಯಾದರೂ ಆ ವೇಳೆಗಾಗಲೇ ಸಾಕಷ್ಟು ವಿಳಂಬವಾಗಿತ್ತು ಮತ್ತು ಅದರ ಸ್ಕ್ರೀನ್ ಶಾಟ್‌ಗಳು ವೈರಲ್ ಆಗಿಬಿಟ್ಟಿದ್ದವು. ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸಲು ಈ ಸಂದರ್ಭವನ್ನು ಪ್ರತಿಪಕ್ಷಗಳು ಬಿಟ್ಟುಕೊಟ್ಟಿಲ್ಲ.
ಕಳಪೆ ಇಂಗ್ಲಿಷ್‌ನಲ್ಲಿ ಬರೆದಿರುವ ಈ ಟ್ವೀಟ್ ‘‘ರಾಜ್ಯ ಸರಕಾರಕ್ಕೆ ಎರಡು ಲಕ್ಷಕ್ಕೂ ಅಧಿಕ ಉದ್ಯೋಗಿಗಳ ಅಗತ್ಯವಿದೆ,ಆದರೆ ಫಡ್ನವೀಸ್ ಸರಕಾರವು ್ಟ ಉದ್ಯೋಗಿಗಳ ಸಂಖ್ಯೆಯನ್ನು ಶೇ.30ರಷ್ಟು ಕಡಿತಗೊಳಿಸಿದೆ’’ ಎಂದು ಟೀಕಿಸಿದೆ.
ಟ್ವೀಟ್‌ನ್ನು ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಕಾಂಗ್ರೆಸ್ ವರಿಷ್ಠ ಸಂಜಯ ನಿರುಪಮ್ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಟ್ಯಾಗ್ ಮಾಡಲಾಗಿದೆ. ಆಗಿರುವ ಹಾನಿಯನ್ನು ಸರಿಪಡಿಸಲು ಮಹಾರಾಷ್ಟ್ರ ಬಿಜೆಪಿಯು ಮುಂದಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮುಂಬೈ ಪೊಲೀಸ್‌ನ ಸೈಬರ್ ಅಪರಾಧ ಘಟಕವನ್ನು ಕೋರಿಕೊಂಡಿರುವುದಾಗಿ ರಾಜ್ಯ ಬಿಜೆಪಿ ವಕ್ತಾರ ಕೇಶವ ಉಪಾಧ್ಯೆ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನಿರುಪಮ್, ಮುಖ್ಯಮಂತ್ರಿಯವರ ಆಡಳಿತ ರಾಜ್ಯ ಬಿಜೆಪಿಗೂ ಖುಷಿಯನ್ನು ನೀಡಿಲ್ಲ, ಕೆಟ್ಟ ಆಡಳಿತ ಪ್ರತಿದಿನ ಬಯಲಾಗುತ್ತಿದೆ ಎಂದು ಹೇಳಿದರು.







