ಬಹುತ್ವ ಅಭಿನಯ ಆಗದೆ ಜೀವ ದ್ರವ್ಯ ಆಗಬೇಕಾಗಿದೆ: ಡಾ.ನಾಗತಿಹಳ್ಳಿ ಚಂದ್ರಶೇಖರ್
ನುಡಿಸಿರಿ 2017-ಪ್ರಶಸ್ತಿ ವಿತರಣೆ, ಸಮಾರೋಪ

ಮೂಡುಬಿದಿರೆ(ರತ್ನಾಕರ ವರ್ಣಿ ವೇದಿಕೆ, ಗೋಪಾಲಕೃಷ್ಣ ಅಡಿಗ ವೇದಿಕೆ), ಡಿ. 3:ಬಹುತ್ವ ಅಭಿನಯ ಆಗದೆ ಜೀವ ದ್ರವ್ಯ ಆಗಬೇಕಾದ ಅಗತ್ಯವಿದೆ. ಜೀವಪರ, ಮಾನವ ಪರವಾದ ನಂಬಿಕೆ ಹುಟ್ಟಿಸುವ ವಿಚಾರಗಳ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿರುವ ನುಡಿಸಿರಿ ಒಂದು ಕೊಂಡಿ ಎಂದು ಡಾ. ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಆಳ್ವಾಸ್ ನುಡಿಸಿರಿಯ 2017ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡುತ್ತ ಸಾಂಸ್ಕೃತಿಕ ಶೂನ್ಯತೆ ಯಿಂದ ದೇಶಕ್ಕೆ ಅಪಾಯ. ಮನೆಯೊಳಗೆ ಯಾವ ಧರ್ಮ ಇದ್ದರೂ ಬೀದಿಗೆ ಬಂದಾಗ ನಿಜವಾದ ಧರ್ಮ ಪ್ರಜಾಪ್ರಭುತ್ವ. ನಾನು ಯಾವೂದೇ ಪಕ್ಷದ ವಕ್ತಾರ ಅಲ್ಲ ಆದರೆ ಅನ್ನ ಭಾಗ್ಯ ಯೋಜನೆ, ಇಂದಿರಾ ಕ್ಯಾಂಟೀನ್ ಉತ್ತಮ ಯೋಜನೆ. ಯಾವ ಪಕ್ಷ ಇರಲಿ ಒಳ್ಳೆಯ ಕೆಲಸವನ್ನು ಬೆಂಬಲಿಸೋಣ. ಸದಾಭಿರುಚಿ, ಸದಾಶಯವನ್ನು ಬಿಟ್ಟುಕೊಡದೆ ಮುಂದುವರಿಸಬೇಕು ಎಂದು ನಾಗತಿಹಳ್ಳಿ ತಿಳಿಸಿದರು.
ಯಾವ ನಿರ್ಣಯ ಮಂಡಿಸದೆ ಇರುವುದೇ ಈ ನುಡಿಸಿರಿಯ ನಿರ್ಣಯ :- ಮಂಡಿಸುವ ಠರಾವುಗಳಿಗೆ ಮರ್ಯಾದೆ ಇಲ್ಲದೆ ಇರುವಾಗ ಮಾಡಿ ತೋರಿಸುವ ಕೆಲಸ ಆಗಬೇಕು. ಕರ್ನಾಟಕ ಸರಕಾರದ ಮುಂದೆ ಮಂಡಿಸಲಾದ ನಾಲ್ಕು ನಿರ್ಣಯ ಕೊಳೆಯುತ್ತಿರುವ ಇನ್ನೊಂದು ನಿರ್ಣಯ ಏಕೆ ಬೇಕು? ಸರೋಜಿನಿ ಮಹಿಷಿ ವರದಿ, ಸರಕಾರಿ ಶಾಲೆಗಳ ಉಳಿಸುವ, ವೃತ್ತಿ ಶಿಕ್ಷಣದಲ್ಲಿ ಕನ್ನಡ, ಕನ್ನಡ ಕೇಂದ್ರಿತ ತಂತ್ರಾಂಶ ಬೇಡಿಕೆ ಈಡೇರಿಲ್ಲ. 27 ಸಾವಿರ ಶಿಕ್ಷಕರ ಕೊರತೆ ಇದೆ. ಯಾವ ನಿರ್ಣಯ ಮಂಡಿಸದೆ ಇರುವುದೇ ಈ ನುಡಿಸಿರಿಯ ನಿರ್ಣಯ. ಉದ್ಯೋಗ ಸಿರಿಯಲ್ಲಿ ಕನ್ನಡ ಮಾಧ್ಯಮದ ಮಕ್ಕಳಿಗೆ ಉದ್ಯೋಗ ನೀಡುವಲ್ಲಿ ಮಹತ್ವದ ಯೋಜನೆಯಾಗಿದೆ ಎಂದು ಡಾ. ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಪರಂಪರೆಯ ಬೇರುಗಳನ್ನು ಮುಂದಿನ ತಲೆ ಮಾರಿಗೆ ಅರ್ಥ ಮಾಡಿಸಲು ನುಡಿಸಿರಿಯಂತಹ ಸಮ್ಮೇಳನ ಮುಖ್ಯ. ಬಹುತ್ವ ಎಲ್ಲರನ್ನು ಒಳಗೊಂಡಂತೆ ಇರುವ ನೆಮ್ಮದಿಯ ಕಲ್ಪನೆ. ಚೀನ ಬಹುತ್ವನ್ನು ಕಳೆದುಕೊಳ್ಳುತ್ತಿದೆ. ಆದರೆ ನಮ್ಮ ದೇಶದ ಹಳ್ಳಿಗಳು ಅದಕ್ಕಿಂತ ಚೆನ್ನಾಗಿದೆ ಈ ರೀತಿಯ ಬಹುತ್ವವನ್ನು ಉಳಿಸಿಕೊಳ್ಳಬೇಕಾಗಿದೆ. ನುಡಿಸಿರಿ ಮುಕ್ತಾಯ ಆರಂಭದಂತೆ ಕಾಣುತ್ತದೆ. ಇಲ್ಲಿ ಯಾವೂದೂ ಕೊನೆಯಾಗುವುದಿಲ್ಲ. ಕ್ರೀಯಾಶೀಲರಾಗಿರುವ ಮನುಷ್ಯರನ್ನು ಕಂಡರೆ ಇಷ್ಟ. ಮಹಾನ್ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿ ಯಾರನ್ನು ದೊಡ್ಡದು, ಚಿಕ್ಕದು ಮಾಡಲಾಗುವುದಿಲ್ಲ. ಪ್ರೀತಿ ಮುಖ್ಯ. ನುಡಿಸಿರಿಯಂತಹ ಕಾರ್ಯದಲ್ಲಿ ಆಳ್ವರು ಸಂಕೇತ ಮಾತ್ರ ಎಂದು ಡಾ. ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ನುಡಿಸಿರಿ ನನಗೆ ತೃಪ್ತಿಯನ್ನು ತಂದು ಕೊಟ್ಟಿದೆ:- ಡಾ.ಮೋಹನ್ ಆಳ್ವ
ನುಡಿಸಿರಿ ನನಗೆ ತೃಪ್ತಿಯನ್ನು ತಂದು ಕೊಟ್ಟಿದೆ. ಮುಂದೆಯೂ ಎಲ್ಲರ ಸಹಕಾರದೊಂದಿಗೆ ಮುಂದುವರಿಸುವ ಉದ್ದೇಶ ಹೊಂದಿದ್ದೇನೆ. ಕರ್ನಾಟಕದ ಬಹುತ್ವದ ನೆಲೆಯ ಬಗ್ಗೆ ಸಾಕಷ್ಟು ಚಿಂತನೆ ಮಂಥನ ನಡೆದಿದೆ. ಕೃಷಿ ಸಿರಿ ಹೆಚ್ಚು ಜನಾಕರ್ಷಣೆಯಾಗಿತ್ತು. ಸಾಹಿತಿ ಎಷ್ಟು ಮುಖ್ಯವೋ ಕಲಾವಿದರು ಅಷ್ಟೇ ಮುಖ್ಯ ಅವರನ್ನು ಗೌರವಿಸುವ ಆಶಯವಿದೆ. ವಿದ್ಯಾರ್ಥಿಗಳು ನೂರು ಕಾಲ ಇದನ್ನು ಮುಂದುವರಿಸುವ ಭರವಸೆ ಮೂಡಿಸಿದ್ದಾರೆ ಎಂದರು.
ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರೀಯೆ ದೊರಕಿದೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಉದ್ಯಮಗಳು ಸ್ಥಾಪನೆಯಾಗಬೇಕು ಈ ಸಂಸ್ಥೆಗಳು ಇಲ್ಲಿನ ಜನರ ಋಣವನ್ನು ಮರೆಯಬಾರದು.ಅವರಿಗೆ ಉದ್ಯೋಗ ಕೊಡುವಂತಾಗಬೇಕು. ಕನ್ನಡ ಮಾಧ್ಯಮಗಳಲ್ಲಿ ಕಲಿತವರಿಗೂ ಅವರ ಕೌಶಲ್ಯವನ್ನು ಪರಿಗಣಿಸಿ ಅವಕಾಶ ನೀಡಬೇಕು. ಉದ್ಯೋಗ ಸಿರಿ ಇನ್ನಷ್ಟು ವಿಸ್ತರಿಸುವ ಉದ್ದೇಶ ಹೊಂದಿರುವುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ ಆಳ್ವ ಸಮಾರೋಪ ಸಮಾರಂಭದ ಸ್ವಾಗತ ಭಾಷಣದಲ್ಲಿ ತಿಳಿಸಿದರು.
'ಆಳ್ವಾಸ್ ನುಡಿ ಸಿರಿ 2017' ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ವಂದನೀಯ ಬಿಷಪ್ ಹೆನ್ರಿ ಡಿ ಸೋಜ, ನಾಡೋಜ ನ್ಯಾ.ಸಂತೋಷ್ ಹೆಗ್ಡೆ, ಡಾ.ತೇಜಸ್ವಿ ಕಟ್ಟೀಮನಿ, ಡಾ.ಸಿದ್ದಲಿಂಗಪಟ್ಟಣ ಶೆಟ್ಟಿ, ಪ್ರೊ.ಜಿ.ಎಸ್.ಹನ್ನೆರಡು ಮಠ, ಬಿ.ಸುರೇಂದ್ರ ರಾವ್, ಡಾ.ಎಂ.ಪ್ರಭಾಕರ ಜೋಶಿ, ಪದ್ಮ ರಾಜ ದಂಡಾವತಿ, ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ, ಪದ್ಮಶ್ರೀ ಗಿರೀಶ್ ಭಾರದ್ವಾಜ್ ರತ್ನ ಮಾಲಾ ಪ್ರಕಾಶ್, ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಅನಿಸಿಕೆ
ನನಗೆ ಜೀವ ಮಾನದ ಸನ್ಮಾನ ಸ್ವೀಕರಿಸಿದಂತಾಗಿದೆ. ದೇಶವನ್ನು ಕಟ್ಟುವ ಕೆಲಸ ಆಗುತ್ತಿದೆ.
-ಡಾ.ತೇಜಸ್ವಿ ಕಟ್ಟಿಮನಿ.
ಸನ್ಮಾನದಿಂದ ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಾಗಲೂ ಸಾಧ್ಯವಿಲ್ಲ .ನನ್ನ ಗುರು ಅಲ್ಲಮ. ಮಂಟೆ ಸ್ವಾಮಿ ಕಲ್ಯಾಣವನ್ನು ಪ್ರವೇಶಿಸಿದಂತೆ ನುಡಿಸಿರಿಗೆ ಬಂದೆ ಅಲ್ಲಿ ಶರಣರು ಅವರನ್ನು ತಡೆದಂತೆ ಇಲ್ಲಿ ಯಾರೂ ನನ್ನನ್ನು ತಡೆಯಲಿಲ್ಲ. ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ, ನಂಬಿಕೆ ಅಭಿಮಾನಕ್ಕೆ ಮನ್ನಣೆ ನೀಡಿ ಬಂದಿದ್ದೇನೆ. ನನಗೆ ಸಲ್ಲಿಸಿದ ಗೌರವ ನಾನು ತೊಡಗಿಸಿಕೊಂಡ ದಲಿತ ಚಳವಳಿಗಾರರಿಗೆ, ಚಳವಳಿಗೆ ಸಮರ್ಪಿ ಸುತ್ತೇನೆ.
- ಪ್ರೊ.ಕೆ.ಬಿ.ಸಿದ್ದಯ್ಯ.
ಕನ್ನಡ ಮನಸ್ಸು ಹೊಂದಿರುವ ವ್ಯಕ್ತಿಗಳಿಂದ ಈ ರೀತಿಯ ಸನ್ಮಾನ ನಡೆಯಲು ಸಾಧ್ಯ.
-ಪದ್ಮರಾಜ ದಂಡಾವತಿ.
ನನಗೆ ಬಂದಿರುವ ಎಲ್ಲಾ ಪ್ರಶಸ್ತಿಗಳಿಂದ ಹೆಚ್ಚು ಸಂತಸವಾಗಿದೆ. ಸಾಂಪ್ರದಾಯಿಕ ಸನ್ಮಾನ ನೋಡಿ ಮಾತೆ ಹೊರಡುವುದಿಲ್ಲ.
-ರತ್ನ ಮಾಲ ಪ್ರಕಾಶ್.
ವಿಸ್ಮಯದ ಅನುಭವ. ಯಕ್ಷಗಾನ ಕಲಾವಿದರ ಸಮುದಾಯದ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದೇನೆ. ಬಹುತ್ವಕ್ಕೆ ಉದಾಹರಣೆ ಯಕ್ಷಗಾನ. ಬಹುತ್ವವನ್ನು ಸಾಂಸ್ಕೃತಿಕ ಸಂಪ್ರದಾಯವಾಗಿ ಸ್ವೀಕರಿಸಿದ ನಾಡು ತುಳುನಾಡು. ಬಹುತ್ವದ ಜೀವಂತ ಮಾದರಿ ನುಡಿಸಿರಿ.
-ಡಾ. ಎಂ.ಪ್ರಭಾಕರ ಜೋಶಿ.
ಸಮಾರಂಭದ ವೇದಿಕೆಯಲ್ಲಿ ಶಾಸಕ ಅಭಯ ಚಂದ್ರ ಜೈನ್, ಗಣೇಶ್ ಕಾರ್ಣಿಕ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಜಯಶೀ ಅಮರನಾಥ ಶೆಟ್ಟಿ ಹಾಗೂ ನುಡಿಸಿರಿ ಸನ್ಮಾನಿತರು ಉಪಸ್ಥಿತರಿದ್ದರು.







