ಚಬಹಾರ್ ಬಂದರು ಲೋಕಾರ್ಪಣೆ
ಭಾರತ-ಇರಾನ್-ಅಫ್ಘಾನ್ ನಡುವೆ ಮಹತ್ವದ ವಾಣಿಜ್ಯ ಮಾರ್ಗ ಆರಂಭ

►ಇರಾನ್‌ನಲ್ಲಿ ಭಾರತ ಅಭಿವೃದ್ಧಿಪಡಿಸಿದ ಬೃಹತ್ ಬಂದರು
ಟೆಹರಾನ್,ಡಿ.3: ಪಾಕಿಸ್ತಾನವನ್ನು ಹೊರಗಿಟ್ಟು ಅಫ್ಘಾನಿಸ್ತಾನ ಹಾಗೂ ಮಧ್ಯಏಶ್ಯ ನಡುವೆ ವಾಣಿಜ್ಯ ಮಾರ್ಗವನ್ನು ತೆರೆಯುವ ಉದ್ದೇಶದಿಂದ ಭಾರತವು ಅಭಿವೃದ್ಧಿಪಡಿಸುತ್ತಿರುವ ಇರಾನ್‌ನ ವ್ಯೂಹಾತ್ಮಕ ಚಬಹಾರ್ ಬಂದರು ರವಿವಾರ ಲೋಕಾರ್ಪಣೆಗೊಂಡಿದೆ. ಪಾಕಿಸ್ತಾನವು ಇರಾನ್ ಹಾಗೂ ಅಫ್ಘಾನಿಸ್ತಾನಕ್ಕೆ ಸರಕುಗಳನ್ನು ಸಾಗಿಸಲು ತನ್ನ ನೆಲಮಾರ್ಗವನ್ನು ಬಳಸಲು ಭಾರತಕ್ಕೆ ಅವಕಾಶ ನೀಡದಿರುವುದರಿಂದ ಚಬಹಾರ್ ಬಂದರಿನ ಆರಂಭವು ಮಹತ್ವದ್ದಾಗಿದೆ. ಚೀನಾ ಅಭಿವೃದ್ಧಿಪಡಿಸುತ್ತಿರುವ ಪಾಕಿಸ್ತಾನದ ಗ್ವಾದರ್ ಬಂದರಿಗೆ ಪ್ರತಿಯಾಗಿ ಭಾರತವು ಇರಾನ್‌ನಲ್ಲಿ ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸಿದೆಯೆಂದು ಭಾವಿಸಲಾಗುತ್ತಿದೆ.ಗ್ವಾದರ್ ಬಂದರು, ಚಬಹಾರ್‌ನಿಂದ ಕೇವಲ 100 ಕಿ.ಮೀ. ದೂರದಲ್ಲಿದೆ. ಭಾರತವು ಚಬಹಾರ್ ಬಂದರು ಯೋಜನೆಗೆ 500 ಮಿಲಿಯ ಡಾಲರ್‌ಗಳ ನೆರವು ನೀಡುತ್ತಿದೆ. 2018ರ ವೇಳೆಗೆ ಈ ಬಂದರು ಪೂರ್ಣಮಟ್ಟದಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಇರಾನ್ ಅಧ್ಯಕ್ಷ ಹಸ್ಸನ್ ರೂಹಾನಿ ಚಬಹಾರ್ ಬಂದರನ್ನು ಉದ್ಘಾಟಿಸಿದರು. ಭಾರತದ ಸಹಾಯಕ ಹಡಗುಗಾರಿಕೆ ಸಚಿವ ಮಶೂಖ್ ಮಾಂಡವ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಬಹಾರ್: ಮುಖ್ಯಾಂಶಗಳು
1.ಚಬಹಾರ್ ಬಂದರು ಇರಾನ್‌ನ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದ ಆಗ್ನೇಯ ಭಾಗದಲ್ಲಿದೆ. ಈ ಬಂದರು ಇರಾನ್, ಅಫ್ಘಾನಿಸ್ತಾನ ಹಾಗೂ ಮಧ್ಯಏಶ್ಯದ ದೇಶಗಳನ್ನು ಭಾರತದ ಜೊತೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಪಾಕಿಸ್ತಾನದ ಸಮುದ್ರಮಾರ್ಗವನ್ನು ಬಳಸದೆ ಭಾರತವು ಪಶ್ಚಿಮ ಕರಾವಳಿಯ ಮೂಲಕ ಈ ಬಂದರನ್ನು ಸಂಪರ್ಕಿಸಲಿದೆ.
2. ಪ್ರಧಾನಿ ನರೇಂದ್ರ ಮೋದಿ 2016ರ ಮೇ ತಿಂಗಳಲ್ಲಿ ಟೆಹರಾನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸುವ ಸಂಬಂಧ ಭಾರತ, ಇರಾನ್ ಹಾಗೂ ಅಫ್ಘಾನಿಸ್ತಾನ ನಡುವೆ ತ್ರಿಪಕ್ಷೀಯ ಒಪ್ಪಂದವೇರ್ಪಟ್ಟಿತ್ತು.
3.ಭಾರತವು ಈಗಾಗಲೇ ಅಫ್ಘಾನಿಸ್ತಾನದಲ್ಲಿ ಝರಾಂಜ್-ದೆಲಾರಮ್ ರಸ್ತೆಯ ನಿರ್ಮಾಣವನ್ನು ಪೂರ್ಣಗೊಳಿಸಿದೆ. ಈ ಮಾರ್ಗವಾಗಿ ಇರಾನ್ ಗಡಿಯನ್ನು ಅಫ್ಘಾನಿಸ್ತಾನದ ನಾಲ್ಕು ಪ್ರಮುಖ ನಗರಗಳ ಮೂಲಕ ಸಂಪರ್ಕಿಸಬಹುದಾಗಿದೆ.
4.ಕಳೆದ ಅಕ್ಟೋಬರ್‌ನಲ್ಲಿ ಭಾರತವು ಚಬಹಾರ್ ಬಂದರಿನ ಮೂಲಕ ಅಫ್ಘಾನಿಸ್ತಾನಕ್ಕೆ ಪ್ರಪ್ರಥಮ ಬಾರಿಗೆ ಗೋಧಿಯನ್ನು ಪೂರೈಕೆ ಮಾಡಿತ್ತು.
5.ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಭಾರತವು ಚಬಹಾರ್ ಬಂದರನ್ನು ತನ್ನ ನೆಲೆಯಾಗಿ ಬಳಸಿಕೊಳ್ಳುತ್ತಿದೆಯೆಂದು ಇಸ್ಲಾಮಾಬಾದ್ ಆರೋಪಿಸುತ್ತಿದೆ.







