ಉಳ್ಳಾಲ ಸೋಮೇಶ್ವರ ಉಚ್ಚಿಲದಲ್ಲಿ ಮುಂದುವರಿದ ಕಡಲ್ಕೊರೆತ
ಕುಸಿತಗೊಂಡ ಐದು ಮನೆಗಳು, ಅಪಾಯದಂಚಿನಲ್ಲಿ ಇನ್ನಷ್ಟು ಮನೆಗಳು

ಉಳ್ಳಾಲ, ಡಿ. 3: ಓಖಿ ಚಂಡಮಾರುತದ ಪ್ರಭಾವದಿಂದ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಭಾರೀ ಗಾತ್ರದ ಸಮುದ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು, ಕಡಲತೀರದ ನಿವಾಸಿಗಳು ಆತಂಕಗೊಂಡಿದ್ದಾರೆ. ಇದರಿಂದಾಗಿ ಹಲವು ಮನೆಗಳು ಧರೆಗುರುಳಿದ್ದು, ಇನ್ನಷ್ಟು ಮನೆಗಳು ಅಪಾಯದಂಚಿನಲ್ಲಿವೆ.
ಓಖಿ ಚಂಡಮಾರುತದ ಪ್ರಭಾವದಿಂದ ಹಾನಿಗೊಳಗಾದ ಪ್ರದೇಶಗಳಿಗೆ ರವಿವಾರ ಸಚಿವ ಯು.ಟಿ. ಖಾದರ್, ಜಿಲ್ಲಾಧಿಕಾರಿ ಸೆಂಥಿಲ್, ತಹಶೀಲ್ದಾರ್, ಕಂದಾಯ ಅಧಿಕಾರಿಗಳು, ಉಳ್ಳಾಲ ನಗರಸಭೆಯ ಆಡಳಿತ ವರ್ಗ, ಅಧಿಕಾರಿಗಳು, ಸೋಮೇಶ್ವರ ಗ್ರಾಮ ಪಂಚಾಯತ್ ಆಡಳಿತ ವರ್ಗ ಹಾಗೂ ಅಧಿಕಾರಿಗಳು ಭೇಟಿ ನೀಡಿ ಕಡಲತಡಿಯ ಜನರಿಗೆ ದೈರ್ಯ ತುಂಬಿದರು.
ಉಳ್ಳಾಲ ಭಾಗದಲ್ಲಿ ಕಡಲಿನ ಆಲೆಗಳ ರಭಸ ಇದೆ ಎಂದು ಅರಿಯುವುದಕ್ಕೆ ಮುನ್ನವೇ ಇದ್ದಕ್ಕಿದ್ದಂತೆಯೇ ಕಡಲು ಪ್ರಕ್ಷುಬ್ಧಗೊಂಡಿದ್ದು ಜನರ ಆತಂಕಕ್ಕೆ ಕಾರಣವಾಗಿತ್ತು. ಕಳೆದ ಒಂದು ತಿಂಗಳ ಮಟ್ಟಿಗೆ ಶಾಂತವಾಗಿದ್ದ ಉಳ್ಳಾಲ ಹಾಗೂ ಸೋಮೇಶ್ವರ ಉಚ್ಚಿಲ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಅಬ್ಬರಕ್ಕೆ ಸೀಗ್ರೌಂಡ್ ಬಳಿ ಶನಿವಾರ ತಡರಾತ್ರಿ ಎರಡು ಮನೆ ಸಂಪೂರ್ಣ ಧರೆಗುರುಳಿದರೆ ಉಚ್ಚಿಲ ಪೆರಿಬೈಲ್‍ನಲ್ಲಿ ಮೂರು ಮನೆಗಳು ಭಾಗಶಃ ಹಾನಿಗೊಳಗಾಗಿದೆ.
ಉಳ್ಳಾಲ ಸೀ ಗ್ರೌಂಡ್ ಬಳಿಯ ನಿವಾಸಿಗಳಾದ ಫಿಲೋಮಿನಾ ಫೆರ್ನಾಂಡಿಸ್ ಹಾಗೂ ಎವರೆಸ್ಟ್ ಅವರಿಗೆ ಸೇರಿದ ಮನೆ ಅದಾಗಿದ್ದು ಶನಿವಾರ ರಾತ್ರಿ ಚರ್ಚ್‍ಗೆ ಪೂಜೆಗೆಂದು ತೆರಳಿ ವಾಪಸ್ ಬಂದು ನೋಡಿದರೆ ಮನೆಗೆ ಧರೆಗುರುಳಿತ್ತು. ಮನೆಯಲ್ಲಿದ್ದ ನಗ, ನಗದು ಇತರ ವಸ್ತು ಸೇರಿದಂತೆ ಪೀಠೋಪಕರಣಗಳು ಸಮುದ್ರ ಪಾಲಾಗಿವೆ. ಉಚ್ಚಿಲ ಪೆರಿಬೈಲ್ ಬಳಿಯಲ್ಲಿ ಯೋಗೀಶ್, ಭವಾನಿ ರಮೇಶ್ ಹಾಗೂ ಮುರಳಿ ಅವರ ಮನೆಗೆ ಭಾಗಶಃ ಹಾನಿಯಾಗಿದೆ.
ಓಖಿ ಪ್ರಭಾವ ಅದ್ಯಾವ ಮಟ್ಟಿಗೆ ಪ್ರಭಾವ ಬೀರಿತ್ತೆಂದರೆ ಉಳ್ಳಾಲದ ಪ್ರತಿಷ್ಠಿತ ರೆಸಾರ್ಟ್ ಸಮ್ಮರ್‍ಸ್ಯಾಂಡ್ಸ್‍ನಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ವಿವಾಹ ವಾರ್ಷಿಕೋತ್ಸವ ರಾತ್ರಿ 11ಕ್ಕೆ ಮುಗಿಯಬೇಕಿದ್ದರೂ 9.45ಕ್ಕೆ ಮುಗಿದುಹೋಯಿತು. ಕಡಲ ಅಲೆಗಳು ರಭಸದಿಂದ ರೆಸಾರ್ಟ್ ತಡೆಗೋಡೆ ದಾಟಿ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದ್ದರಿಂದ ಸೇರಿದ್ದ ಜನತೆ ಸುನಾಮಿ ಅಪ್ಪಳಿಸಿದೆ ಎಂಬ ಭಯದಿಂದ ದಿಕ್ಕಾಪಾಲಾಗಿದ್ದರು.
ಕಡಲಿನ ಅಬ್ಬರ ಬಿರುಸು
ಉಳ್ಳಾಲ, ಸೋಮೇಶ್ವರ, ಸೀಗ್ರೌಂಡ್, ಕಿಲೇರಿಯಾ ನಗರ, ಸುಭಾಷ ನಗರ, ಮುಕ್ಕಚ್ಚೇರಿ, ಕೈಕೋ, ಮೊಗವೀರಪಟ್ನದಲ್ಲಿ ಸಮುದ್ರ ಬಿರುಸುಗೊಂಡಿದೆ. ಕೆಲವು ಮನೆಗಳು ಅಪಾಯದಂಚಿನಲ್ಲಿದೆ. ಉಚ್ಚಿಲ ಪೆರಿಬೈಲ್ ಭಾಗದಲ್ಲಿ ಸಮುದ್ರದ ಅಲೆಗಳು ಸುಮಾರು ಐವತ್ತು ಅಡಿ ದೂರದ ರಸ್ತೆಯನ್ನು ದಾಟಿ ಮುಂದೆ ಬಂದಿದ್ದು ಪಕ್ಕದಲ್ಲಿ ಬತ್ತಿ ಹೋಗಿದ್ದ ಕೆರೆಗಳಲ್ಲಿ ನೀರು ತುಂಬಿದೆ. ಭಾನುವಾರ ಮಧ್ಯಾಹ್ನ ಕಡಲಿನ ಅಬ್ಬರ ಇತ್ತು. ಸಮುದ್ರದ ಅಲೆಗಳು ಬಹಳಷ್ಟು ದೂರ ಬಂದಿದೆ.
ಪರಿಶೀಲನೆ ನಡೆಸಿದ ಸಚಿವ ಯು.ಟಿ. ಖಾದರ್ ಮಾತನಾಡಿ ಜಿಲ್ಲಾಧಿಕಾರಿ ತಾತ್ಕಾಲಿಕ ಪರಿಹಾರವಾಗಿ ಕಡಲ ತೀರಕ್ಕೆ ಕಲ್ಲು ಹಾಕುವುದಾಗಿ ತಿಳಿಸಿದ್ದಾರೆ. ಹಾಗೆಯೇ ಕಡಲ ತೀರ ತಲಪಾಡಿಯಲ್ಲೂ ಚಂಡಮಾರುತದ ಪ್ರಭಾವಕ್ಕೆ ಸಮುದ್ರದ ಅಲೆಗಳು ಹೊಡೆಯುವ ಸಾಧ್ಯತೆ ಇರುವುದರಿಂದ ತಲಪಾಡಿ, ಉಳ್ಳಾಲ, ಸೋಮೇಶ್ವರ ಉಚ್ಚಿಲ ಸೇರಿದಂತೆ ಸುಮಾರು ಎಂಬತ್ತು ಕುಟುಂಬವನ್ನು ಸ್ಥಳಾಂತರಿಸಿ ಅವರಿಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಉಳಿದು ಕೊಂಡವರಿಗೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಉಚ್ಚಿಲ, ಮೀಪದ ಪೆರಿಬೈಲ್, ಉಳ್ಳಾಲದ ಸೀಗ್ರೌಂಡ್, ಕಿಲೆಯರಿಯಾ ನಗರ ಮೊಗವೀರಪಟ್ಣಕ್ಕೆ ಭೇಟಿ ನೀಡಿ ಆತಂಕ ಪಡಬೇಕಾಗಿಲ್ಲ. ಸಂಜೆ ತನಕ ಗಾಳಿ ಇದೆ. ಭಯಪಡಬೇಡಿ, ಸಮುದ್ರದ ಅಂಚಿನ ಮನೆಗಳು ಬೇರೆ ಮನೆಗೆ ಸ್ಥಳಾಂತರಗೊಳ್ಳಿ, ಗಂಜಿ ಕೇಂದ್ರಗಳಿಗೆ ತೆರಳುವಂತೆ ಸೂಚಿಸಿದರು.
ಪ್ರಕೃತಿ ವಿಕೋಪ ದೇವರ ಕೈಯಲ್ಲಿದೆ. ನಮ್ಮ ಕೈಯಲ್ಲಿ ಇಲ್ಲ. ದೇವರ ದಯೆಯಿಂದ ಅಬ್ಬರ ಕಡಿಮೆ ಆಗಬಹುದು. ಸಂತ್ರಸ್ತರಿಗೆ ಪರಿಹಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಕಡಲ ತೀರದ ಮಂದಿ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಅನಾಹುತ ಎದುರಿಸಲು ಇಲಾಖೆ ಸಜ್ಜಾಗಿದೆ. ಹವಾಮಾನ ಇಲಾಖೆ ಕರವಾಳಿ ತೀರದ ನಿವಾಸಿಗಳು ಆತಂಕ ಪಡಬೇಕಿಲ್ಲ ಎಂದು ಸೂಚಿಸಿದೆ. ಸಂತ್ರಸ್ತರಿಗೆ ಗಂಜಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ.
ಯು.ಟಿ. ಖಾದರ್
ಆಹಾರ ಹಾಗೂ ನಾಗರೀಕ ಪೂರೈಕೆ ಸಚಿವರು







