ಜ.15ರೊಳಗೆ ಕಾಂಗ್ರೆಸ್ ಪಕ್ಷದ ಕರಡು ಪ್ರಣಾಳಿಕೆ ಸಿದ್ಧ: ಎಂ. ವೀರಪ್ಪ ಮೊಯ್ಲಿ
ಮಂಗಳೂರು, ಡಿ.3: 2018ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕರಡು ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗು ತ್ತಿದ್ದು, ಜ.15ರೊಳಗೆ ಇದನ್ನು ಪೂರ್ಣಗೊಳಿಸಿ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಲಾಗುವುದು ಎಂದು ಕರಡು ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಹಾಗೂ ಸಂಸದ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಡು ಪ್ರಣಾಳಿಕೆ ಸಮಿತಿಯ ಪ್ರಥಮ ಸಭೆಯಲ್ಲಿ 15 ಉಪ ಸಮಿತಿಗಳನ್ನು ರಚಿಸಲಾಗಿದೆ. ಈ ಉಪಸಮಿತಿಗಳು ಏನೇನು ಪ್ರಣಾಳಿಕೆಗೆ ಸೇರ್ಪಡೆಯಾಗಬೇಕು ಎಂಬುದನ್ನು ನಿರ್ಧರಿಸಿ ವರದಿಯನ್ನು ನೀಡುತ್ತಿದೆ. ಅದಕ್ಕಾಗಿ ರಾಜ್ಯವನ್ನು ಆರು ವಲಯಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಲಯಕ್ಕೆ ಕರಡು ಸಮಿತಿಯು ಭೇಟಿ ನೀಡಿ ಸಮಾಲೋಚನೆ ನಡೆಸುತ್ತಿವೆ. ಇಂದಿಲ್ಲಿ ದ.ಕ., ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಶಾಸಕರು, ಪಕ್ಷದ ಇತರ ಘಟಕಗಳ ಪ್ರಮುಖರು ಸಭೆ ಸೇರಿ ಕರಡು ಪ್ರಣಾಳಿಕೆಗೆ ಅಭಿಪ್ರಾಯಗಳನ್ನು ನೀಡಲಿದ್ದಾರೆ ಎಂದರು.
ಡಿ.9ರಂದು ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ, ಧಾರವಾಡ, ಗದಗ, ಜಯಪುರ, ಬಾಗಲಕೋಟೆ, ಡಿ.11ರಂದು ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ, ಡಿ.23ರಂದು ಮೈಸೂರು, ಚಾಮರಾಜ ನಗರ, ಕೊಡಗು ಹಾಗೂ ಮಂಡ್ಯ, ಡಿ.30ರಂದು ದಾವಣಗೆರೆ, ಚಿತ್ರದುರ್ಗ, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆ ಹಾಗೂ ಜ.4ರಂದು ಗುಲ್ಬರ್ಗ ವಲಯಗಳ ಸಭೆ ನಡೆಯಲಿದೆ ಎಂದು ಮೊಯ್ಲಿ ಹೇಳಿದರು.
ಸರಕಾರದಿಂದಲೂ ವಿಷನ್ ಸಿದ್ಧತೆ: ಪ್ರಣಾಳಿಕೆ ರಚನೆಯಲ್ಲಿ ಪಕ್ಷ ಸಿದ್ಧತೆ ನಡೆಸಿದರೆ ರಾಜ್ಯ ಸರಕಾರದಿಂದಲೂ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ‘ನವಕರ್ನಾಟಕ-2025’ ವಿಷನ್ ಡಾಕ್ಯುಮೆಂಟ್‌ನ್ನು ತಯಾರಿಸಲಾಗಿದೆ. ಇದರ ಸಮಗ್ರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತಿದೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಭಿಪ್ರಾಯಗಳನ್ನು ಕಲೆ ಹಾಕಿ ಅಧ್ಯಯನ ನಡೆಸಿ ಈ ವಿಷನ್‌ನ್ನು ಸಿದ್ಧಪಡಿಸಲಾಗಿದೆ ಎಂದರು.
ಫಲಾನುಭವಿಗಳ ಪಟ್ಟಿ ತಯಾರಿ: 2013ರಿಂದ ರಾಜ್ಯ ಸರಕಾರದಿಂದ ಈವರೆಗೆ ವಿವಿಧ ಯೋಜನೆಗಳಲ್ಲಿ ಪ್ರಯೋಜನ ಪಡೆದ ಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಕಳೆದ 4 ವರ್ಷದಲ್ಲಿ 6.54 ಕೋಟಿ ಮಂದಿಯ ಪೈಕಿ ಸುಮಾರು 5 ಕೋಟಿ ಮಂದಿ ಸರಕಾರದ ಒಂದಿಲ್ಲೊಂದು ಯೋಜನೆಗಳ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಅಂತಹವರ ಹಾಗೂ ಯೋಜನೆಗಳ ಪಟ್ಟಿಯನ್ನು ತಯಾರಿಸಲಾಗುತ್ತಿದೆ. ಇದನ್ನು ಕೂಡ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ವೀರಪ್ಪ ಮೊಯ್ಲಿ ನುಡಿದರು.
2013ರ ಚುನಾವಣೆಯಲ್ಲಿ ಕಾಂಗ್ರೆಸ್ 170 ಆಶ್ವಾಸನೆಗಳನ್ನು ನೀಡಿದ್ದು, ಅದರಲ್ಲಿ 159 ಆಶ್ವಾಸನೆಗಳನ್ನು ಈಡೇರಿಸಿದೆ. 11 ಆಶ್ವಾಸನೆಗಳು ಚಾಲನೆಯ ಹಂತದಲ್ಲಿದೆ. ಇನ್ನೂ ಕೆಲವು ಆಶ್ವಾಸನೆಗಳು ಹೊಸತಾಗಿದ್ದು, ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿಲ್ಲ ಎಂದರಲ್ಲದೆ, ಈ ಬಾರಿ ಕಾಂಗ್ರೆಸ್ ಹಾಗೂ ಸರಕಾರ ಜೊತೆಯಾಗಿ ಚುನಾವಣೆ ಎದುರಿಸಲು ವ್ಯಾಪಕವಾದ ಯೋಜನೆಗಳನ್ನು ಹಾಕಿಕೊಂಡಿದೆ ಎಂದರು.
ಕರಡು ಪ್ರಣಾಳಿಕೆ ಸಮಿತಿ ಸದಸ್ಯ ಸುದರ್ಶನ್ ಮಾತನಾಡಿ, ಅಭಿವದ್ಧಿಯ ವಿಚಾರದಲ್ಲಿ ಗುಜರಾತ್‌ಗೆ ಹೋಲಿಸಿದರೆ, ವಾರ್ಷಿಕ ತಲಾ ಆದಾಯ, ಹೂಡಿಕೆಗಳಲ್ಲಿ ಕರ್ನಾಟಕವೇ ಮುಂದಿದೆ ಎಂದು ದಾಖಲೆಗಳನ್ನು ಮುಂದಿಟ್ಟರಲ್ಲದೆ, ಬಿಜೆಪಿಯ ಪರಿವರ್ತನಾ ಯಾತ್ರೆ ಪಶ್ಚಾತ್ತಾಪದ ಯಾತ್ರೆಯಾಗುತ್ತಿದೆ. ಯಾತ್ರೆಯಲ್ಲೂ ಭಿನ್ನಾಭಿಪ್ರಾಯದ ಸ್ವರ ಕೇಳಿಬರುತ್ತಿದೆ ಎಂದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮನಪಾ ಸಚೇತಕ ಶಶಿಧರ ಹೆಗ್ಡೆ, ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಕರಡು ಪ್ರಣಾಳಿಕೆ ಸಮಿತಿಯ ಸದಸ್ಯರಾದ ಕೆ.ಸಿ.ಕೊಂಡಯ್ಯ, ಪುಷ್ಪಾ ಅಮರನಾಥ್, ಶಾರದಾ ಮೋಹನ್ ಉಪಸ್ಥಿತರಿದ್ದರು.







