ಕಾನೂನು ಮೀರುವ ಮೂಲಕ ಅಪರಾಧ ಎಸಗಿದ ಪ್ರತಾಪ್ ಸಿಂಹ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಡಿ.3: ಬಿಜೆಪಿ ನಾಯಕರು ಚುನಾವಣೆಯ ಸಂದರ್ಭದಲ್ಲಿ ಸಾಮರಸ್ಯ ಕದಡುವ ಉದ್ದೇಶದಿಂದಲೇ ಹನುಮ ಜಯಂತಿ, ದತ್ತ ಜಯಂತಿ ಆಚರಣೆ ನೆಪದಲ್ಲಿ ರ್ಯಾಲಿ ಹಾಗೂ ಸಮಾವೇಶಗಳನ್ನು ನಡೆಸುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ರವಿವಾರ ಇಲ್ಲಿನ ಆನಂದರಾವ್ ವೃತ್ತದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಪೊಲೀಸರ ಅನುಮತಿಯನ್ನು ಧಿಕ್ಕರಿಸಿ, ಬ್ಯಾರಿಕೇಡ್ ತಳ್ಳಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಜನಪ್ರತಿನಿಧಿಗಳು ಈ ನೆಲದ ಕಾನೂನು ಗೌರವಿಸುವುದು ಕರ್ತವ್ಯ. ಆದರೆ, ಅವರು ಕಾನೂನು ಮೀರುವ ಮೂಲಕ ಅಪರಾಧ ಎಸಗಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಮಾತ್ರವೇ ಹನುಮ ಹಾಗೂ ರಾಮನ ಜಯಂತಿಯನ್ನು ಆಚರಿಸುತ್ತಿಲ್ಲ. ಇಲ್ಲಿನ ಪ್ರತಿಯೊಬ್ಬರು ಹನುಮ ಮತ್ತು ರಾಮನನ್ನು ಪೂಜಿಸುತ್ತಾರೆ. ಆದರೆ, ಬಿಜೆಪಿಯವರು ಸಾಮರಸ್ಯ ಕದಡಲು ಜಯಂತಿಗಳನ್ನು ಆಚರಿಸುತ್ತಿದ್ದಾರೆ. ಹೀಗಾಗಿ ಪೊಲೀಸರು ಮುನ್ನಚ್ಚರಿಕೆ ಕ್ರಮ ಕೈಗೊಂಡಿರುವುದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿದರು.
ಸಂಸದ ಪ್ರತಾಪ್ ಸಿಂಹ ಪೊಲೀಸರ ಆದೇಶ ಉಲ್ಲಂಘಿಸಿ ಬ್ಯಾರಿಕೇಡ್ ತಳ್ಳಿ ಕಾರು ಚಲಾಯಿಸಿಕೊಂಡು ಹೋಗಿರುವ ಇಂತಹವರ ಮನಸ್ಥಿತಿ ಎಂತಹದ್ದು ಎಂದು ಪ್ರಶ್ನಿಸಿದ ಅವರು, ನಾಳೆ ಏನಾದರೂ ಹೆಚ್ಚು-ಕಮ್ಮಿಯಾದರೆ ಯಾರು ಹೊಣೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಇದನ್ನು ನಾವೆಲ್ಲ ಬೆಂಬಲಿಸಬೇಕು ಎಂದರು.
‘ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂಸದ ಪ್ರತಾಪ್ ಸಿಂಹರವರ ಕಾನೂನು ಬಾಹಿತ ಕೃತ್ಯವನ್ನು ಬೆಂಬಲಿಸುವ ರೀತಿಯಲ್ಲಿ ಮಾತನಾಡಬಾರದು. ಇದರಿಂದ ರಾಜ್ಯದ ಜನತೆ ತಪ್ಪು ಸಂದೇಶ ರವಾನಿಸಿದಂತಾಗಲಿದೆ’
-ಸಿದ್ದರಾಮಯ್ಯ ಮುಖ್ಯಮಂತ್ರಿ







