ಶಿವಮೊಗ್ಗ : ರಾಗಿ, ಮೆಕ್ಕೆಜೋಳ ರಾಶಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಶಿವಮೊಗ್ಗ, ನ. 3: ಶಿವಮೊಗ್ಗ ತಾಲೂಕಿನ ಸವಳಂಗ ರಸ್ತೆಯಲ್ಲಿರುವ ಕಲ್ಲಾಪುರ, ಕೊಮ್ಮನಾಳು, ಬಿಕ್ಕೋನಹಳ್ಳಿ ಗ್ರಾಮಗಳಲ್ಲಿ ದಾಸ್ತಾನು ಹಾಕಿದ್ದ ರಾಗಿ, ಮೆಕ್ಕೆಜೋಳ ಬೆಳೆಗಳಿಗೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ತಡರಾತ್ರಿ ವರದಿಯಾಗಿದೆ.
ತಕ್ಷಣವೇ ಎಚ್ಚೆತ್ತ ಗ್ರಾಮಸ್ಥರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಗಳಿಗೆ ದೌಡಾಯಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಅನಾಹುತ ತಪ್ಪಿಸಿವೆ. ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಘಟನೆ: ಕೊಮ್ಮನಾಳು ಗ್ರಾಮದಲ್ಲಿ ಮೆಕ್ಕೆಜೋಳದ ರಾಶಿ, ಕಲ್ಲಾಪುರ ಗ್ರಾಮದಲ್ಲಿ ರಾಗಿ ಬಣವೆ ಹಾಗೂ ಬಿಕ್ಕೋನಹಳ್ಳಿಯಲ್ಲಿ ಮೆಕ್ಕೆಜೋಳದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿದ್ದು, ಸಂಬಂಧಿಸಿದ ರೈತರಿಗೆ ಅಪಾರ ನಷ್ಟ ಉಂಟಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಬೆಳೆಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳ್ಯಾರು ಎಂಬುವುದು ತಿಳಿದುಬಂದಿಲ್ಲ. ಘಟನೆಯಿಂದ ಸುತ್ತಮುತ್ತಲಿನ ಗ್ರಾಮದ ರೈತರಲ್ಲಿ ಆತಂಕ ಉಂಟು ಮಾಡಿದೆ. ವಿಶೇಷವಾಗಿ ರಸ್ತೆ ಬದಿಗಳಲ್ಲಿ ಬೆಳೆ, ಹುಲ್ಲು ದಾಸ್ತಾನು ಮಾಡಿರುವ ರೈತರು ಭಯಭೀತರಾಗಿದ್ದಾರೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯ ಗ್ರಾಮಸ್ಥರು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.







