ಅಳಿಕೆಯವರ ಒಡನಾಟ ಕಲಾಯಾನಕ್ಕೆ ಸೋಪಾನ: ದಾಸಪ್ಪ ರೈ
ಅಳಿಕೆ ಸಹಾಯನಿಧಿ ವಿತರಣೆ - ಗ್ರಹ ಸಮ್ಮಾನ

ಮಂಗಳೂರು, ಡಿ. 3: 'ಕರ್ನಾಟಕ ಮೇಳದಲ್ಲಿ ತಾನು ಕಿರಿಯನಾಗಿ ರಂಗ ಪ್ರವೇಶಿದಾಗ ಅಳಿಕೆ, ಬೋಳಾರ, ಸಾಮಗರಂಥವರಿಂದ ಸಾಕಷ್ಟು ಪ್ರಭಾವಿತನಾಗಿದ್ದೇನೆ, ಅಳಿಕೆ ರಾಮಯ್ಯ ರೈಯವರ ಜೊತೆ ಪಾತ್ರವಹಿಸುತ್ತಿದ್ದಾಗ ಅನುಸರಿಸುತ್ತಿದ್ದ ಎಚ್ಚರಿಕಯ ನಡೆ ತನ್ನ ಐದು ದಶಕಗಳ ಕಲಾಯಾನಕ್ಕೆ ಭದ್ರ ಸೋಪಾನ ಹಾಕಿ ಕೊಟ್ಟಿದೆ ' ಎಂದು ಹಿರಿಯ ಯಕ್ಷಗಾನ ಕಲಾವಿದ ಕೆ.ಹೆಚ್.ದಾಸಪ್ಪ ರೈ ಹೇಳಿದ್ದಾರೆ.
ದಿ.ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ವತಿಯಿಂದ ಗೃಹಸಮ್ಮಾನದೊಂದಿಗೆ ನೀಡಲಾದ 'ಅಳಿಕೆ ಸಹಾಯ ನಿಧಿ'ಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಪುತ್ತೂರಿನ ಬಪ್ಪಳಿಗೆಯಲ್ಲಿರುವ ಕಲಾವಿದರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಹಾಪ್ರಸಾದ್ ರೈ ಅವರು ದಾಸಪ್ಪ ರೈ ಮತ್ತು ಚಿತ್ರಾವತಿ ದಂಪತಿಗೆ ಶಾಲು,ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕದೊಂದಿಗೆ ಸಹಾಯನಿಧಿ ಸಮರ್ಪಿಸಿದರು.
ಟ್ರಸ್ಟ್ ನ ಪ್ರಧಾನ ಸಲಹೆಗಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು. ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸಮ್ಮಾನ ಪತ್ರ ವಾಚಿಸಿದರು.ಹಿರಿಯ ಯಕ್ಷಗಾನ ಕಲಾವಿದ ಉಮೇಶ ಶೆಟ್ಟಿ ಉಬರಡ್ಕ ಪ್ರಸ್ತಾವನೆಗೈದರು. ಅಳಿಕೆ ಬಾಲಕೃಷ್ಣ ರೈ ಸ್ವಾಗತಿಸಿದರು. ಬಜನಿ ಗುತ್ತು ಮಹಾಬಲ ರೈ ವಂದಿಸಿದರು.







