ಇಂದಿರಾ ಕ್ಯಾಂಟೀನ್ ಮಾದರಿಯ 'ರಮ್ಯಾ ಕ್ಯಾಂಟೀನ್' ಆರಂಭ
ಮಂಡ್ಯದಲ್ಲಿ ಕ್ಯಾಂಟೀನ್ ಪೈಪೋಟಿ

ಮಂಡ್ಯ, ಡಿ.3: ರಾಜ್ಯ ಸರಕಾರದ ಇಂದಿರಾ ಕ್ಯಾಂಟೀನ್ ಇನ್ನೂ ಜಿಲ್ಲೆಗೆ ಬಂದಿಲ್ಲ. ಆದರೆ, ಈಗಾಗಲೇ ಇಂದಿರಾ ಕ್ಯಾಂಟೀನ್ ಮಾದರಿಯ ಐದಾರು ಕ್ಯಾಂಟೀನ್‍ಗಳು ಬಡವರಿಗೆ ಕಡಿಮೆ ದರದಲ್ಲಿ ಹೊಟ್ಟೆ ತುಂಬಿಸುತ್ತಿವೆ.
ಜೆಡಿಎಸ್ ಅಭಿಮಾನಿಯ ಅಪ್ಪಾಜಿ ಕ್ಯಾಂಟೀನ್, ಯುವ ಮುಖಂಡ ಗಣಿಗ ರವಿಕುಮಾರ್ ಅಭಿಮಾನಿಯ ಅಣ್ಣ ಕ್ಯಾಂಟೀನ್ ಸೇರಿದಂತೆ ಇನ್ನೂ ಐದು ಕ್ಯಾಂಟೀನ್‍ಗಳ ಜತೆಗೆ ರವಿವಾರ 'ರಮ್ಯಾ ಕ್ಯಾಂಟೀನ್' ಸೇರ್ಪಡೆಯಾಗಿದೆ.
ನಗರದ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದ ಮಹಾವೀರ ವೃತ್ತದ ನಗರಸಭೆ ವಾಣಿಜ್ಯ ಸಂಕೀರ್ಣದಲ್ಲಿ ಅಪ್ಪಾಜಿ ಕ್ಯಾಂಟೀನ್ ಯಶಸ್ವಿಯಾಗಿ ನಡೆಯುತ್ತಿದ್ದು, ಈಗ ಮಾಜಿ ಸಂಸದೆ ರಮ್ಯಾ ಹೆಸರಿನ ಕ್ಯಾಂಟೀನ್ ಜಿಲ್ಲಾಸ್ಪತ್ರೆ ಸಮೀಪದ ಅಶೋಕ ನಗರದಲ್ಲಿ ಕಾರ್ಯಾರಂಭ ಮಾಡಿದೆ.
ರಘು ಎಂಬುವರು ರಮ್ಯಾ ಕ್ಯಾಂಟೀನ್ ಆರಂಭಿಸಿದ್ದಾರೆ. ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಪಕ್ಕದ ರಸ್ತೆಬದಿ ತಳ್ಳುಗಾಡಿಯಲ್ಲಿ ಹೊಟೇಲ್ ನಡೆಸುತ್ತಿದ್ದ ರಘು ಎಂಬುವರು ಜಿಲ್ಲಾಸ್ಪತ್ರೆ ಸಮೀಪ ರಮ್ಯಾ ಕ್ಯಾಂಟೀನ್ ತೆರೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ರಮ್ಯಾ ಸ್ಪರ್ಧಿಸಲಿದ್ದಾರೆಂಬ ಸುದ್ದಿಯ ಹಿನ್ನೆಲೆಯಲ್ಲಿ ರಮ್ಯಾ ಹೆಸರಿನ ಕ್ಯಾಂಟೀನ್ ದಿಢೀರ್ ಆರಂಭವಾಗಿರುವುದು ರಮ್ಯಾ ರಾಜ್ಯಕೀಯ ಪ್ರವೇಶದ ವಿಷಯದ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.
ರಾಜಕೀಯ ನಾಯಕರ ಹೆಸರಿನಲ್ಲಿ ಕ್ಯಾಂಟೀನ್ ತೆರೆದು 10 ರೂ.ಗೆ ಊಟ, ತಿಂಡಿ ನೀಡುತ್ತಿರುವುದು ರಾಜಕೀಯ ದುರುದ್ದೇಶ ಎಂದು ಹಲವರು ಟೀಕಿಸಿದ್ದರೆ, ಇಂತಹ ಕ್ಯಾಂಟೀನ್‍ಗಳಿಂದಾಗಿ ಅನುಕೂಲವಾಗಿದೆ ಎಂಬುದು ಬಡ, ಮಧ್ಯಮ, ಕೂಲಿ ಕಾರ್ಮಿಕರ ವಾದವಾಗಿದೆ.
ರಾಜಕೀಯ ಉದ್ದೇಶವಿಲ್ಲ:
ರಮ್ಯಾ ಹೆಸರಿನಲ್ಲಿ ಕ್ಯಾಂಟೀನ್ ತೆರೆದಿರುವುದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ರಮ್ಯಾ ಅಭಿಮಾನಿಯಾಗಿ ಕ್ಯಾಂಟೀನ್‍ಗೆ ಅವರ ಹೆಸರಿಟ್ಟಿದ್ದೇನೆ. 10 ರೂ.ಗೆ ತಿಂಡಿ, ಅನ್ನಸಾಂಬಾರ್ ನೀಡಲು ಉದ್ದೇಶಿಸಿದ್ದೇನೆ ಎಂದು ಮಾಲೀಕ ರಘು ಸ್ಪಷ್ಟಪಡಿಸಿದ್ದಾರೆ.
ರಮ್ಯಾ ಕ್ಯಾಂಟೀನ್ ಉದ್ಘಾಟನೆ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ಮಹಿಳಾ ಘಟಕದ ಅಧ್ಯಕ್ಷೆ ಅಚಿಜನಾ ಶ್ರೀಕಾಂತ್, ಚಿದಾನಂದಮೂರ್ತಿ, ಮಮತ, ಪದ್ಮ ಮೋಹನ್, ಶುಭದಾಯಿನಿ, ಕೆಆರ್‍ಡಿಸಿಎಲ್ ನಿರ್ದೇಶಕ ಹಾಗು ರಮ್ಯಾ ಅಭಿಮಾನಿ ಸಂಘದ ಅಧ್ಯಕ್ಷ ಶಶಿಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಆರಂಭದ ದಿನ ಗ್ರಾಹಕರಿಗೆ ಉಚಿತವಾಗಿ ತಿಂಡಿ ವಿತರಿಸಿದ ರಘು, ನಾಳೆಯಿಂದ 10 ರೂ.ಗೆ ಇಡ್ಲಿ, ಚೋ ಚೋ ಬಾತ್, ದೋಸೆ, ಅನ್ನಸಾಂಬಾರ್, ಚಪಾತಿ, ಮುದ್ದೆ, ಉದ್ದಿನ ವಡೆ, ಮಸಾಲೆ ವಡೆ, ಇತರ ತಿಂಡಿ ತಿನಿಸುಗಳನ್ನು ನೀಡಲಾಗುವುದು ಎಂದರು.







