ದಲಿತ ಅಥವಾ ಮುಸ್ಲಿಮರನ್ನು ಜೆಡಿಎಸ್ ಅಧ್ಯಕ್ಷರನ್ನಾಗಿ ಮಾಡಲಿ : ಝಮೀರ್ ಅಹಮದ್ ಸವಾಲು

ಮಂಡ್ಯ, ಡಿ.3: ಕುಮಾರಸ್ವಾಮಿ ಜೆಡಿಎಸ್ ಸರಕಾರದಲ್ಲಿ ದಲಿತರಿಗೆ ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸುವ ಮೊದಲು, ದಲಿತರು ಅಥವಾ ಮುಸ್ಲಿಮರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಿ ಎಂದು ಜೆಡಿಎಸ್ ಬಂಡಾಯ ಶಾಸಕ ಝಮೀರ್ ಅಹಮದ್ ಸವಾಲು ಹಾಕಿದ್ದಾರೆ.
ಕೊಡಿಯಾಲದಲ್ಲಿ ಶಾದಿಮಹಲ್ ಉದ್ಘಾಟನೆಗೆ ರವಿವಾರ ನಗರಕ್ಕೆ ಆಗಮಿಸಿದ್ದ ವೇಳೆ ಪ್ರವಾಸಿಮಂದಿರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‍ನವರು ದಲಿತರನ್ನು ಡಿಸಿಎಂ ಮಾಡಲಿ ಅಥವಾ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‍ಗೆ ಹೈಕಮಾಂಡ್ ಎನ್ನುವುದಿದ್ದು, ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಕಷ್ಟ. ಆದರೆ, ಜೆಡಿಎಸ್‍ಗೆ ಆ ಸಮಸ್ಯೆ ಇಲ್ಲದಿರುವುದರಿಂದ ದಲಿತರನ್ನು ಡಿಸಿಎಂ ಬೇಕಾದ್ರು ಮಾಡಬಹುದು. ಆದರೆ, ಅದಕ್ಕೆ ಮೊದಲು ದಲಿತರು ಅಥವಾ ಮುಸ್ಲಿಮರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವುದು ಸೂಕ್ತ ಎಂದು ಅವರು ಪ್ರತಿಪಾದಿಸಿದರು.
ಆಪರೇಷನ್ ಕಮಲದ ಸಂದರ್ಭದಲ್ಲಿ ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೆ. ಆದರೆ, ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಜೋಡಿಸಿರಲಿಲ್ಲ ಎಂಬುದು ನನಗೆ ಗೊತ್ತು. ಆದರೆ, ಆಪರೇಷನ್ ಕಮಲದಲ್ಲಿ ಸಿದ್ದರಾಮಯ್ಯ ಕೈಜೋಡಿಸಿದ್ದರೆಂದು ಕುಮಾರಸ್ವಾಮಿ ಏಕೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಅವರು ತಿರುಗೇಟು ನೀಡಿದರು.
ಕುಮಾರಸ್ವಾಮಿ ಅವರಿಗೆ ಕೌಂಟರ್ ಕೊಡಬೇಕು ಎನಿಸಿದರೆ ಯಾವ ಟೈಂನಲ್ಲಿ ಏನ್ ಮಾಡ್ತಾರೆ ಅಂತ ಅವ್ರಿಗೇ ಗೊತ್ತಿರುವುದಿಲ್ಲ. ಹತ್ತು ವರ್ಷದ ನಂತರ ಆಪರೇಷನ್ ಕಮಲದ ವಿಷಯ ಮಾತನಾಡಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ಜತೆಯಲ್ಲೇ ಇದ್ದ ಮತ್ತೊಬ್ಬ ಜೆಡಿಎಸ್ ಬಂಡಾಯ ಶಾಸಕ ಎನ್.ಚಲುವರಾಯಸ್ವಾಮಿ ಇದಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರ ವಿರುದ್ಧ ಕುಮಾರಸ್ವಾಮಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಜನರಲ್ಲಿ ಗೊಂದಲ ಮೂಡಿಸುವ ಈ ರೀತಿಯ ಆರೋಪ ಮಾಡುವುದರಿಂದ ಯಾವುದೇ ಉಪಯೋಗವಾಗುವುದಿಲ್ಲ ಎಂದರು.
ಪ್ರಜ್ವಲ್ ರೇವಣ್ಣ ಅವರ ಕುಟುಂಬದವರೇ ಆಗಿರೋದ್ರಿಂದ ಸೂಟ್‍ಕೇಸ್ ವಿಷಯ ಮಾತನಾಡಿದ್ರೂ ಪ್ರಧಾನ ಕಾರ್ಯದರ್ಶಿಯಾಗುತ್ತಾರೆ. ಆದರೆ, ಇದೇ ಮಾತನ್ನು ಬೇರೆ ಯಾರಾದ್ರೂ ಹೇಳಿದ್ದರೆ ಜೆಡಿಎಸ್‍ನಲ್ಲಿ ಉಳಿದುಕೊಳ್ಳಲು ಸಾಧ್ಯವಾ ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.
ಒಂದು ಬಾರಿ ಸಮ್ಮಿಶ್ರ ಸರಕಾರವನ್ನು ಜನರು ನೋಡಿದ್ದಾರೆ. ನಂತರ ಪೂರ್ಣ ಪ್ರಮಾಣದ ಸರಕಾರ ಬಂತು. ಮುಂದೆಯೂ ಕಾಂಗ್ರೆಸ್ ನೇತೃತ್ವದ ಪೂರ್ಣ ಪ್ರಮಾಣದ ಸರಕಾರವೇ ಬರುತ್ತದೆ ಎಂದು ಅವರು ಸರಕಾರ ರಚನೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ಕೋಡಿಮಠಶ್ರೀ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದರು.
ನಾಗಮಂಗಲ ಕ್ಷೇತ್ರದಲ್ಲಿ ತಮ್ಮ ಮತ್ತು ಸಿದ್ದರಾಮಯ್ಯ ನಡುವೆ ನೇರ ಸ್ಪರ್ಧೆ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಒಕ್ಕಲಿಗರ ಮತ ಸೆಳೆಯಲು ಹಾಗೆ ಹೇಳಿದ್ದಾರೆ. ನಾವೂ ಅವರ (ದೇವೇಗೌಡ) ಗರಡಿಯಲ್ಲೇ ಬೆಳೆದಿದ್ದೇವೆ. ದೇವೇಗೌಡರು ನನ್ನ ಕ್ಷೇತ್ರದ ಕನ್ನಡ ರಾಜ್ಯೋತ್ಸವ, ದೇವಸ್ಥಾನ ಉದ್ಘಾಟನೆಯಲ್ಲೂ ಭಾಗವಹಿಸುತ್ತಿದ್ದಾರೆ ಪಾಪ ಎಂದು ವ್ಯಂಗ್ಯವಾಡಿದರು.
ರಮ್ಯಾ ರಾಜ್ಯ ರಾಜಕಾರಣಕ್ಕೆ ಬರುವ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಸಮೀಕ್ಷೆ ಪ್ರಕಾರ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಆದರೆ, ಮೊನ್ನೆ ಬಿಜೆಪಿಯವರು ಕೈಚಳಕ ತೋರಿಸುವ ಯತ್ನ ಮಾಡಿದ್ದಾರೆ. ಕಾಂಗ್ರೆಸ್ ಮುಂಚೂಣಿಯಲ್ಲಿದೆ ಎಂಬ ಸತ್ಯ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ಗೊತ್ತಿದೆ ಎಂದು ಚಲುವರಾಯಸ್ವಾಮಿ ಹೇಳಿದರು.







