ಒಖಿ ಚಂಡಮಾರುತ ಹಾವಳಿ: ಮುನ್ನೆಚ್ಚರಿಕೆ ವಹಿಸಲು ಸಚಿವ ಖಾದರ್ ಸೂಚನೆ
ಉಳ್ಳಾಲ: 2 ಮನೆಗಳು ನೆಲಸಮ, 8 ಮನೆಗಳಿಗೆ ಭಾಗಶಃ ಹಾನಿ

► 40 ಕುಟುಂಬಗಳ ಸ್ಥಳಾಂತರ
► ಕಂಟ್ರೋಲ್ ರೂಂ ಸ್ಥಾಪನೆ
►4 ಹೆಲಿಕಾಪ್ಟರ್ ನಿಯೋಜನೆ
ಮಂಗಳೂರು, ಡಿ.3: ಒಖಿ ಚಂಡಮಾರುತದ ಹಾವಳಿಯಿಂದ ಕಂಗೆಟ್ಟಿರುವ ಜನತೆಗೆ ಧೈರ್ಯ ತುಂಬುವ ಸಲುವಾಗಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಲು ಆಹಾರ ಸಚಿವ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಒಖಿ ಚಂಡಮಾರುತದ ಹಿನ್ನೆಲೆಯಲ್ಲಿ ಸಮುದ್ರ ಉಕ್ಕಿ ಹರಿದು ಸಂಭವಿಸಿದ ಹಾನಿ ಮತ್ತು ಜನರಲ್ಲಿ ಮನೆಮಾಡಿಕೊಂಡ ಆತಂಕದ ಛಾಯೆಯ ಪರಿಣಾಮ ಉಳ್ಳಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ರವಿವಾರ ಸಂಜೆ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿ ವಿವಿಧ ಇಲಾಖೆಗಳು ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಅರಬ್ಬಿ ಸಮುದ್ರದಲ್ಲಿ ಶನಿವಾರ ಸಂಜೆ 6 ಗಂಟೆಯ ಬಳಿಕ ಏಕಾಏಕಿ ಅಲೆಗಳ ಅಬ್ಬರ ಹೆಚ್ಚಾಗಿ ನೀರು ದಡಕ್ಕೆ ಬಡಿದ ಪರಿಣಾಮವಾಗಿ ಉಳ್ಳಾಲದಲ್ಲಿ 2 ಮನೆಗಳು ಸಂಪೂರ್ಣ ನಾಶವಾಗಿದ್ದು, ಎಂಟು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸುಮಾರು 40ರಷ್ಟು ಮನೆಗಳು ಅಪಾಯದಲ್ಲಿದೆ. ಆ ಮನೆ ಮಂದಿಯನ್ನು ಬೇರೆ ಬೇರೆ ಕಡೆಗೆ ಸ್ಥ್ಥಳಾಂತರ ಮಾಡಲಾಗಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾಹಿತಿ ನೀಡಿದರು.
ಮಧ್ಯರಾತ್ರಿ ತನಕ ಸುಮಾರು 5-6 ಮೀ.ನಷ್ಟು ಸಮುದ್ರದ ಅಲೆಗಳು ತೀರದಿಂದ ಮುಂದೆ ಬಂದಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರ ಜತೆಗೆ ಜಿಲ್ಲಾಡಳಿತ ಕೂಡ ತಕ್ಷಣ ಸ್ಪಂದಿಸಿದೆ. ಸ್ವತಃ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಯ ಮುಖ್ಯಸ್ಥರು ಧಾವಿಸಿ ಪರಿಹಾರ ಕಾರ್ಯಾಚರಣೆ ನಡೆಸಿದ ಬಗ್ಗೆ ಸಚಿವ ಖಾದರ್ ಶ್ಲಾಘನೆ ವ್ಯಕ್ತಪಡಿಸಿದರು.
ಈಗ ಸಮುದ್ರದ ಅಬ್ಬರ ಕಡಿಮೆಯಾಗಿದೆ. ಚಂಡಮಾರುತ ಗೋವಾ, ಮಹಾರಾಷ್ಟ್ರದತ್ತ ಸಾಗಿದ್ದರಿಂದ ಇನ್ನೂ 2 ದಿನ ಕಡಲು ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಡಿ.4ರ ರಾತ್ರಿ 11:30ರ ತನಕ ಜಾಗ್ರತೆ ವಹಿಸಲು ಹೇಳಿದ್ದರೂ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು 24 ಗಂಟೆಯೂ ಕಟ್ಟೆಚ್ಚರ ವಹಿಸಬೇಕು ಎಂದು ಖಾದರ್ ಸೂಚಿಸಿದರು.
ಯಾವ ಕಾರಣಕ್ಕೂ ಯಾವುದೇ ಮೀನುಗಾರರು ಕನಿಷ್ಟ ಇನ್ನೆರಡು ದಿನ ಸಮುದ್ರಕ್ಕೆ ಇಳಿಯಬಾರದು. ಜನರು ಬೀಚ್ ತಿರುಗಾಟಕ್ಕೂ ತೆರಳಬಾರದು. ಕಡಲ ಕಿನಾರೆಯ ನಿವಾಸಿಗಳು ಮನೆ ಬಿಟ್ಟು ತಮ್ಮ ಸಂಬಂಧಿಕರು ಅಥವಾ ಜಿಲ್ಲಾಡಳಿತ ಸೂಚಿಸಿರುವ ಮನೆ, ಶಾಲೆ ಅಥವಾ ಉಳ್ಳಾಲ ದರ್ಗಾದ ಪುನರ್ವಸತಿ ಕೇಂದ್ರದಲ್ಲಿರಬೇಕು. ಜಿಲ್ಲಾಡಳಿತ ಸಂತ್ರಸ್ತರಿಗೆ ಆಹಾರ ಸಹಿತ ಭದ್ರತೆ ಒದಗಿಸಲಿದೆ ಎಂದು ಖಾದರ್ ಹೇಳಿದರು.
ಶನಿವಾರ ರಾತ್ರಿ ಮನೆಯಿಂದ ಹೊರ ಬಂದಿದ್ದ ಸುಮಾರು 40 ಕುಟುಂಬಗಳಿಗೆ ತಲಪಾಡಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ರವಿವಾರ ಬೆಳಗ್ಗೆ ಹೆಚ್ಚಿನವರು ಈ ಕೇಂದ್ರದಿಂದ ಮರಳಿದ್ದಾರೆ. ಆಸುಪಾಸಿನ ಕೆಲವು ಶ್ರೀಮಂತರು ತಮ್ಮ ಮನೆಗಳಲ್ಲೂ ಉಳಿದುಕೊಳ್ಳಲು ಅವಕಾಶ ನೀಡಿದ್ದರು ಎಂದ ಖಾದರ್, ಮಂಗಳೂರು ಹಳೆ ಬಂದರು ಮತ್ತು ಎನ್‌ಎಂಪಿಟಿಯಲ್ಲಿ ಕೇರಳ ಸಹಿತ ಎಲ್ಲ ಮೀನುಗಾರರ ಬೋಟ್ ಇಡಲು ಅವಕಾಶ ನೀಡಲಾಗಿತ್ತು. ಇವುಗಳು ಲಂಗರು ಹಾಕಿದ್ದು, ಯಾರಿಗೂ ಮೀನುಗಾರಿಕೆಗೆ ತೆರಳಲು ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಹೇಳಿದರು.
ಸಭೆಯಲ್ಲಿ ಉಳ್ಳಾಲ ನಗರಸಭೆಯ ಅಧ್ಯಕ್ಷ ಹುಸೈನ್ ಕುಂಞಿಮೋನು, ಮುಹಮ್ಮದ್ ಮುಕ್ಕಚ್ಚೇರಿ, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ಆರೋಗ್ಯ ಅಧಿಕಾರಿ ಸಿಕಂದರ್ ಪಾಷ, ಕೋಸ್ಟ್ ಗಾರ್ಡ್ ಕಾರ್ಯಾಚರಣೆ ಅಧಿಕಾರಿ ಪ್ರವೀಣ್ ಕುಮಾರ್ ಜಸ್ವಾಲ್ ಉಪಸ್ಥಿತರಿದ್ದರು.
ಪರಿಹಾರ ಧನ ವಿತರಣೆ
ಎರಡು ಮನೆ ಸಂಪೂರ್ಣ ನಾಶವಾಗಿರುವ ಎವರೆಸ್ಟ್ ಅಲ್ಫೋನ್ಸೊ ಮತ್ತು ಅವಿಲ್ ಮೊಂತೆರೊ ಕುಟುಂಬಕ್ಕೆ ಸಚಿವ ಯು.ಟಿ.ಖಾದರ್ ತಲಾ ಒಂದು ಲಕ್ಷ ರೂ. ಪರಿಹಾರ ವಿತರಿಸಿದರು. ಭಾಗಶಃ ಹಾನಿಯಾಗಿರುವ ಮನೆಗಳ ನಷ್ಟದ ಬಗ್ಗೆ ಅಂದಾಜು ನಡೆಸಿ ಇನ್ನೆರಡು ದಿನದಲ್ಲಿ ಪರಿಹಾರ ನೀಡಲಾಗುವುದು ಎಂದು ಸಚಿವರು ಹೇಳಿದರು.
ಮನೆ ಕಳೆದುಕೊಂಡ ಎರಡು ಕುಟುಂಬಗಳಿಗೆ ತಕ್ಷಣ ಬೇರೆ ಕಡೆ ಸರಕಾರಿ ಜಾಗ ಗುರುತಿಸಿಕೊಡುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿದ ಸಚಿವರು ಮನೆ ಕಟ್ಟಲು ಬೇಕಾದ ಹಣವನ್ನು ಸರಕಾರ ಯಾವುದಾದರೂ ಯೋಜನೆ ಮೂಲಕ ವಿತರಿಸಲಿದೆ ಎಂದು ಭರವಸೆ ನೀಡಿದರು.
4 ಹೆಲಿಕಾಪ್ಟರ್ ನಿಯೋಜನೆ
ತೀವ್ರ ಕಡಲ್ಕೊರೆತ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗೋವಾದಿಂದ ನಾಲ್ಕು ಹೆಲಿಕಾಪ್ಟರ್‌ಗಳನ್ನು ಕೋಸ್ಟ್ ಗಾರ್ಡ್ ಮಂಗಳೂರಿನಲ್ಲಿ ನಿಯೋಜಿಸಲಿದೆ ಎಂದು ಕೋಸ್ಟ್ ಗಾರ್ಡ್‌ನ ಹಿರಿಯ ಅಧಿಕಾರಿಗಳು ಭರವಸೆ ನೀಡಿದರು.
ಕಂಟ್ರೋಲ್ ರೂಂ
ಜಿಲ್ಲಾಧಿಕಾರಿ ಕಚೇರಿಯ 1077 ನಂಬರ್‌ನ ಕಂಟ್ರೋಲ್ ರೂಂ ದಿನದ 24 ಗಂಟೆಯೂ ಕಾರ್ಯಾಚರಿಸಲಿದೆ. ಅಧಿಕಾರಿಗಳು ಕೂಡ ಜಾಗೃತರಾಗಿರಬೇಕು. ಆರೋಗ್ಯ, ಅಗ್ನಿಶಾಮಕ, ಪೊಲೀಸ್, ಕೋಸ್ಟ್‌ಗಾರ್ಡ್, ಕಂದಾಯ, ಬಂದರು ಮತ್ತು ಮೀನುಗಾರಿಕೆ ಮತ್ತಿತರ ಇಲಾಖೆ ಅಧಿಕಾರಿಗಳು ಯಾವುದೇ ಕಾರ್ಯಾಚರಣೆಗೂ ಸಿದ್ಧರಾಗಿರಬೇಕು ಎಂದು ಸಚಿವ ಖಾದರ್ ಸೂಚಿಸಿದರು.
ಮತ್ತೆ ಬಂದರೂ ಅಚ್ಚರಿ ಇಲ್ಲ
ಒಖಿ ಚಂಡಮಾರುತ ಗುಜರಾತ್‌ನತ್ತ ವಾಲಿದರೂ ಬಳಿಕ ಮಹಾರಾಷ್ಟ್ರ, ಗೋವಾದತ್ತ ಪಥ ಬದಲಿಸಿದೆ. ಮಂಗಳೂರಿನತ್ತ ಬಂದರೂ ಅಚ್ಚರಿ ಇಲ್ಲ. ಹಾಗಾಗಿ ಡಿ.6ರವರೆಗೆ ಮೀನುಗಾರಿಕೆಗೆ ತೆರಳಲು ಆಸ್ಪದ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಸಾರ್ವಜನಿಕರಲ್ಲಿ ಮನವಿ
ಪ್ರಾಕೃತಿಕ ಅನಾಹುತಗಳು ಸಂಭವಿಸುವ ಸಂದರ್ಭ ಸಾರ್ವಜನಿಕರು ಜಿಲ್ಲಾಡಳಿತದ ಜತೆ ಸಹಕರಿಸುವಂತೆ ಮನವಿ ಮಾಡಿದ ಜಿಲ್ಲಾಧಿಕಾರಿ, ಶನಿವಾರ ರಾತ್ರಿ ಉಕ್ಕೇರಿದ ಕಡಲನ್ನು ವೀಕ್ಷಿಸಲು ವಿವಿಧ ಊರುಗಳ ಜನರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಅವರನ್ನು ನಿಯಂತ್ರಿಸುವುದೇ ಪೊಲೀಸ್ ಮತ್ತು ಗೃಹರಕ್ಷಕ ದಳಕ್ಕೆ ಸಮಸ್ಯೆಯಾಗಿತ್ತು. ಹಾಗಾಗಿ ಇಂತಹ ಸಂದರ್ಭ ಜನರು ಅನಗತ್ಯವಾಗಿ ಜಮಾಯಿಸದೆ ಸಹಕರಿಸಬೇಕು ಎಂದರು.







