ಕಸ್ತೂರಿ ರಂಗನ್, ಗಾಡ್ಗಿಲ್ ವರದಿ, ವೈಲ್ಡ್ ಲೈಫ್, ಪುಷ್ಪಗಿರಿ ವನ್ಯಧಾಮ, ಆನೆ ಕಾರಿಡಾರ್ ಯೋಜನೆಗಳ ವಿರುದ್ಧ ಪ್ರತಿಭಟನೆ

ಕಡಬ, ಡಿ.4. ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ಕಸ್ತೂರಿ ರಂಗನ್, ಗಾಡ್ಗಿಲ್ ವರದಿ, ವೈಲ್ಡ್ ಲೈಫ್, ಪುಷ್ಪಗಿರಿ ವನ್ಯಧಾಮ ಮತ್ತು ಆನೆ ಕಾರಿಡಾರ್ ಯೋಜನೆಗಳನ್ನು ವಿರೋಧಿಸಿ ಗ್ರಾಮಸ್ಥರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕಡಬ ತಾಲೂಕು ಕಚೇರಿಯ ಮುಂಭಾಗದಲ್ಲಿ ಇಂದು ಪೂರ್ವಾಹ್ನ ಬೃಹತ್ ಪ್ರತಿಭಟನೆ ನಡೆಯಿತು.
ಕಡಬ ತಾಲೂಕು ವ್ಯಾಪ್ತಿಯ ಬಲ್ಯ, ಕೌಕ್ರಾಡಿ, ಶಿರಾಡಿ, ಶಿಬಾಜೆ, ಕೊಂಬಾರು, ಬಿಳಿನೆಲೆ, ಸುಬ್ರಹ್ಮಣ್ಯ, ಐನೆಕಿದು, ಹರಿಹರ, ಕೊಲ್ಲಮೊಗ್ರು, ಏನೆಕಲ್, ಬಳ್ಪ, ಕೂತ್ಕುಂಜ ಸೇರಿದಂತೆ ಹಲವು ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ ಮತ್ತು ಗಾಡ್ಗಿಲ್ ವರದಿಯಲ್ಲಿ ನೋಟಿಫಿಕೇಶನ್ ಮಾಡಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ವಾಸಿಸುವಂತಹ ಸಾವಿರಾರು ಕುಟುಂಬಗಳು ಬೀದಿಪಾಲಾಗುವ ಪರಿಸ್ಥಿತಿ ತಲೆದೋರಿದೆ. ಇದೀಗ ಅಂತಿಮ ಗಜೆಟ್ ನೋಟಿಫಿಕೇಶನ್ ಮಾಡಲಾಗಿದ್ದು, ಅದನ್ನು ತಡೆಹಿಡಿಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.
ಪ್ರತಿಭಟನೆಯಲ್ಲಿ ಕಡಬ ತಾಲೂಕು ಜಾತ್ಯಾತೀತ ಜನತಾದಳ ಅಧ್ಯಕ್ಷ ಸೈಯದ್ ಮೀರಾ ಸಾಹೇಬ್, ಕಡಬ ತಾಲೂಕು ರೈತ ಸಂಘದ ಅಧ್ಯಕ್ಷ ವಿಕ್ಟರ್ ಮಾರ್ಟಿಸ್, ಚಂದ್ರಶೇಖರ ಗೌಡ ಕೋಡಿಬೈಲು, ಗುರುವಪ್ಪ ಕಲ್ಲುಗುಡ್ಡೆ, ಯುವ ಜನತಾದಳ ಕಡಬ ತಾಲೂಕು ಅಧ್ಯಕ್ಷ ಹರೀಶ್ ಎನ್ಕಾಜೆ, ಮಹಿಳಾ ಜನತಾದಳ ಕಡಬ ತಾಲೂಕು ಅಧ್ಯಕ್ಷೆ ಲೂಸಿ ಮೊದಲಾದವರು ಪಾಲ್ಗೊಂಡಿದ್ದರು.





