ಉ.ಪ್ರ. ನಗರ ಪಂಚಾಯತ್ ಚುನಾವಣೆ ಸೋಲಿನ ಬಗ್ಗೆ ಬಿಜೆಪಿ ಮೌನ: ಅಖಿಲೇಶ್ ಟೀಕೆ

ಇಟಾಹ್, ಡಿ.4: ಉತ್ತರ ಪ್ರದೇಶದ ಮೇಯರ್ ಚುನಾವಣೆಯಲ್ಲಿ ಉತ್ತಮ ನಿರ್ವಹಣೆ ತೋರಿದ್ದಕ್ಕೆ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿರುವ ಬಿಜೆಪಿ ‘‘ಸುಳ್ಳುಗಳನ್ನು ಹರಡುತ್ತಿದೆ’’ ಹಾಗೂ ನಗರ ಪಾಲಿಕಾ ಮತ್ತು ನಗರ ಪಂಚಾಯತ್ ಚುನಾವಣೆಗಳಲ್ಲಿ ತನ್ನ ಸೋಲಿನ ಬಗ್ಗೆ ಮೌನ ವಹಿಸಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
‘‘ಬಿಜೆಪಿಯು ಸುಳ್ಳನ್ನೇ ಬಡಿಸುವ ಪಕ್ಷವಾಗಿದೆ. ಅದು ಉತ್ತರ ಪ್ರದೇಶದ 16 ಮೇಯರ್ ಸ್ಥಾನಗಳ ಪೈಕಿ 14 ಸ್ಥಾನಗಳನ್ನು ಇವಿಎಂಗಳಿಂದಾಗಿ ಗೆದ್ದಿದೆ. ಆದರೆ ಅದು ನಗರ ಪಾಲಿಕಾ ಮತ್ತು ನಗರ ಪರಿಷದ್ ಚುನಾವಣೆಗಳ ಸೋಲಿನ ಬಗ್ಗೆ ಚಕಾರವೆತ್ತುತ್ತಿಲ್ಲ’’ ಎಂದು ಇಟಾಹ್ ನಗರದಲ್ಲಿ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅಖಿಲೇಶ್ ಸುದ್ದಿಗಾರರೊಡನೆ ಮಾತನಾಡುತ್ತಾ ಹೇಳಿದ್ದಾರೆ.
‘‘ಭಾರತಕ್ಕಿಂತ ಬಹಳಷ್ಟು ಅಭಿವೃದ್ಧಿ ಸಾಧಿಸಿರುವ ದೇಶಗಳು ಬ್ಯಾಲೆಟ್ ಪೇಪರುಗಳನ್ನು ಚುನಾವಣೆಗೆ ಉಪಯೋಗಿಸುತ್ತಿದ್ದರೆ, ಇಲ್ಲಿ ಉಪಯೋಗಿಸಲು ಅಡ್ಡಿಯೇನು ? ದೋಷಪೂರಿತ ಇವಿಎಂಗಳನ್ನು ಹೇಗೆ ದುರಸ್ತಿಗೊಳಿಸಲಾಗುತ್ತಿದೆ ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು. ದೋಷಪೂರಿತ ಇವಿಎಂಗಳನ್ನು ದುರಸ್ತಿ ಮಾಡಬಹುದಾದರೆ, ಸರಿಯಾಗಿ ಕಾರ್ಯನಿರ್ವಹಿಸುವ ಇವಿಎಂಗಳನ್ನೂ ತಿರುಚಬಹುದು’’ ಎಂದು ಯಾದವ್ ಹೇಳಿದ್ದಾರೆ.
ಈಗಾಗಲೇ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಎಎಪಿ ಕೂಡ ಇವಿಎಂಗಳನ್ನು ತಿರುಚಲಾಗಿದೆ ಎಂದು ಆರೋಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು.







