ಚಾಲಕ, ಕ್ಲೀನರ್ ನಿಂದ ಕಿರುಕುಳ: ವ್ಯಾನ್ ನಿಂದ ಹೊರಕ್ಕೆ ಜಿಗಿದ 7 ತಿಂಗಳ ಗರ್ಭಿಣಿ ಮೃತ್ಯು

ಹೈದರಾಬಾದ್, ಡಿ.4: ವ್ಯಾನೊಂದರ ಚಾಲಕ ಹಾಗು ಕ್ಲೀನರ್ ಗರ್ಭಿಣಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಲು ಯತ್ನಿಸಿದ್ದು, ಅವರಿಂದ ತಪ್ಪಿಸಿಕೊಳ್ಳಲು ವಾಹನದಿಂದ ಹೊರಕ್ಕೆ ಜಿಗಿದ ಗರ್ಭಿಣಿ ಮೃತಪಟ್ಟ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದೆ.
ಬಟ್ಟೆ ಮಾರಾಟ ವ್ಯಾಪಾರಸ್ಥೆಯಾಗಿರುವ ಕಲಾವತಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಹೈದರಾಬಾದ್ ನ ಹೊರವಲಯದ ಕೊಂಪಲ್ಲಿಯಿಂದ ತನ್ನ ಗ್ರಾಮಕ್ಕೆ ಏಳು ವರ್ಷದ ಪುತ್ರಿಯೊಂದಿಗೆ ಹಿಂದಿರುಗುತ್ತಿದ್ದರು. ರಾಜ್ಯ ಸಾರಿಗೆಯ ಬಸ್ ಸಿಗದೆ ಇದ್ದುದರಿಂದ ಅವರು ವ್ಯಾನೊಂದಕ್ಕೆ ಹತ್ತಿದ್ದರು. ಸುಮಾರು 1 ಕಿ.ಮೀ. ದೂರ ಸಾಗಿದ ನಂತರ ಚಾಲಕ ಹಾಗು ಕ್ಲೀನರ್ ಕಲಾವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಅವರು ವ್ಯಾನ್ ನಿಂದ ಹೊರಕ್ಕೆ ಜಿಗಿದಿದ್ದಾರೆ. ತಕ್ಷಣವೇ ವ್ಯಾನ್ ನಿಲ್ಲಿಸಿ ಕಲಾವತಿಯವರ ಮಗಳನ್ನು ಕೆಳಗಿಳಿಸಿ ಚಾಲಕ ಹಾಗು ಕ್ಲೀನರ್ ಪರಾರಿಯಾಗಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕಾಗಮಿಸಿದ್ದು, ಅದಾಗಲೇ ಕಲಾವತಿ ಮೃತಪಟ್ಟಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
“ವಾಹನದೊಳಗೆ ಏನು ನಡೆದಿದೆ ಎನ್ನುವುದನ್ನು ವಿವರಿಸಲು ಮಗುವಿಗೆ ಹೇಳಲು ಸಾಧ್ಯವಿಲ್ಲ. ಸರ್ಕ್ಯೂಟ್ ಫೂಟೇಜ್ ಇಮೇಜ್ ಗಳನ್ನು ಗಮನಿಸಿದರೆ ವಾಹನದಿಂದ ಹೊರಕ್ಕೆ ಜಿಗಿಯುವ ಮೊದಲು ಬಟ್ಟೆಯ ಬ್ಯಾಗನ್ನು ಹೊರಗೆಸೆದಿದ್ದಾರೆ” ಎಂದು ಸರ್ಕಲ್ ಇನ್ ಸ್ಪೆಕ್ಟರ್ ಲಿಂಗೇಶ್ವರ್ ರಾವ್ ಹೇಳಿದ್ದಾರೆ.
ವಾಹನದಿಂದ ಜಿಗಿಯುವ ಮೊದಲು ತಾಯಿ ವಾಹನದ ಚಾಲಕ ಹಾಗು ಕ್ಲೀನರ್ ಜೊತೆ ಜಗಳವಾಡಿದ್ದಳು ಎಂದು ಕಲಾವತಿಯವರ ಪುತ್ರಿ ತಿಳಿಸಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.







