ತುಂಬೆ ಪಿಯು ಕಾಲೇಜು ಬ್ಲಾಕ್ ನ ನೂತನ ಕಟ್ಟಡ ಉದ್ಘಾಟನೆ
ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಶಬನಾ ಫೈಝಲ್ ಕರೆ
ಬಂಟ್ವಾಳ, ಡಿ. 4: ತುಂಬೆ ಮೊಯ್ದಿನ್ ಶಿಕ್ಷಣ ಸಂಸ್ಥೆಯ ಪಿ.ಯು. ಬ್ಲಾಕ್ (ಶಬನಾ ಬ್ಲಾಕ್)ನ ನೂತನ ಕಟ್ಟಡವನ್ನು ದುಬೈಯ ಕೆಇಎಫ್ ಸಂಸ್ಥೆಯ ಸಹ ಸಂಸ್ಥಾಪಕಿ ಶಬನಾ ಫೈಝಲ್ ಸೋಮವಾರ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಂಬೆ ಮೊಯ್ದಿನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಬಿ. ಅಹ್ಮದ್ ಹಾಜಿ ಮೊಯ್ದಿನ್ ಮಾತನಾಡಿ, ಶ್ರದ್ಧೆ, ಶಿಸ್ತು ಮತ್ತು ಸಮಯಪ್ರಜ್ಞೆ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಕಠಿಣ ಶ್ರಮದಿಂದ ಹೆಚ್ಚಿನ ಜ್ಞಾನವನ್ನು ಸಂಪಾದಿಸಬೇಕು ಎಂದರು.
29 ವರ್ಷಗಳ ಹಿಂದೆ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳ ಜೊತೆಗೆ ಆರಂಭಗೊಂಡ ಈ ಸಂಸ್ಥೆಯಲ್ಲಿ ಪ್ರಸ್ತುತ ಸುಮಾರು 1,500 ವಿದ್ಯಾರ್ಥಿಗಳು, 60ಕ್ಕೂ ಹೆಚ್ಚು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸಂಸ್ಥೆಯ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗಕ್ಕೇರಿಸುವ ಜೊತೆಗೆ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು ಎಂದವರು ಹಾರೈಸಿದರು.
ಶಬನಾ ಫೈಝಲ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸಿಕ್ಕಿದಂತಹ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸಾಧನೆಯ ಗುರಿಯನ್ನು ತಲುಪಬೇಕು. ತನ್ನ ಹೆಸರಲ್ಲಿ ಕಾಲೇಜಿನಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಿದಕ್ಕಾಗಿ ಪೋಷಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ನುಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದುಬೈಯ ಕೆಇಎಫ್ ಸಂಸ್ಥೆಯ ಸಂಸ್ಥಾಪಕ ಫೈಝಲ್ ಕೆ.ಇ., ತುಂಬೆ ಗ್ರೂಪ್ ಯುಎಇ, ಗಲ್ಫ್ ಮೆಡಿಕಲ್ ವಿಶ್ವವಿದ್ಯಾನಿಲಯ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಯ್ದಿನ್, ಕೆಇಎಫ್ ಸಿಇಒ ಸೋಫಿಯಾ ಮಾತನಾಡಿ ಶುಭ ಹಾರೈಸಿದರು.
ಇದೇ ವೇಳೆ ಗಲ್ಫ್ ಮೆಡಿಕಲ್ ವಿಶ್ವವಿದ್ಯಾನಿಲಯದ ವತಿಯಿಂದ ಶಾಲೆಯ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜಿನ ಪ್ರತಿಭಾನ್ವಿತ 160 ವಿದ್ಯಾರ್ಥಿಗಳಿಗೆ ಸುಮಾರು 10 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ದುಬೈಯ ಕೆಇಎಫ್ ಸಂಸ್ಥಾಪಕ ಫೈಝಲ್, ಸಹ ಸಂಸ್ಥಾಪಕಿ ಶಬನಾ ಫೈಝಲ್ ಹಾಗೂ ತುಂಬೆ ಗ್ರೂಪ್-ಯುಎಇ, ಗಲ್ಫ್ ಮೆಡಿಕಲ್ ವಿಶ್ವವಿದ್ಯಾನಿಲಯದ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಯ್ದಿನ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತುಂಬೆ ಮೊಯ್ದಿನ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕಿ ಬಿ. ಫಾತಿಮಾ ಅಹ್ಮದ್ ಹಾಜಿ, ಎಂಇಟಿ ಟ್ರಸ್ಟಿ ಬಿ.ಎಂ.ಅಶ್ರಫ್, ಡಾ. ಶರೀಫ್, ನಫೀಸಾ, ಅಕ್ರಂ ಮೊಯ್ದಿನ್ ಮತ್ತಿತರರು ಉಪಸ್ಥಿರಿದ್ದರು.
ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಸ್ವಾಗತಿಸಿದರು. ಉಪನ್ಯಾಸಕಿ ಶರ್ಮಿಳಾ ವಂದಿಸಿದರು. ವಿದ್ಯಾರ್ಥಿನಿ ಖತೀಜಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಕಬೀರ್ ಕಾರ್ಯಕ್ರಮಕ್ಕೆ ಸಹಕರಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಶಾಲಾ ದೈಹಿಕ ಶಿಕ್ಷಕ ಜಗದೀಶ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು ನಡೆಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.







