ಕಾಲಮಿತಿಯಲ್ಲಿ ಹೊಸ ಸೇತುವೆ ನಿರ್ಮಾಣ ಪೂರ್ಣಗೊಳಿಸಲು ಶಾಸಕಿ ಶಾರದಾ ಪೂರ್ಯನಾಯ್ಕ್ ಸೂಚನೆ

ಶಿವಮೊಗ್ಗ,ನ: ನಗರದ ಹೊರವಲಯ ಶಿವಮೊಗ್ಗ - ರಾಮನಗರ ಜಿಲ್ಲಾ ಹೆದ್ದಾರಿ ಸೋಮಿನಕೊಪ್ಪದ ಪ್ರೆಸ್ ಕಾಲೋನಿ ಬಳಿ ನಬಾರ್ಡ್‍ನಡಿ ಹೊಸ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಕ್ರಮಕೈಗೊಂಡಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾಸಕಿ ಶಾರದಾ ಪೂರ್ಯನಾಯ್ಕ್‍ರವರು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದರು.
'ಕಾಲಮಿತಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು. ಗುಣಮಟ್ಟ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು' ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್‍ಗಳಿಗೆ ಶಾಸಕಿ ಶಾರದಾ ಪೂರ್ಯನಾಯ್ಕ್ ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗುತ್ತಿಗೆದಾರ ರಘು, ಕೋಟೆಗಂಗೂರು ಗ್ರಾಮ ಪಂಚಾಯತ್ ಸದಸ್ಯ ದೂದ್ಯನಾಯ್ಕ್ ಸೇರಿದಂತೆ ಮೊದಲಾದವರಿದ್ದರು.
ಶಿಥಿಲಾವಸ್ಥೆ: ಪ್ರೆಸ್ ಕಾಲೋನಿ ಬಳಿ ಕಳೆದ ಹಲವು ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಸೇತುವೆಯು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿ, ಅಪಾಯಕಾರಿಯಾಗಿ ಪರಿಣಮಿಸಿತ್ತು. ಜೊತೆಗೆ ಕಿರಿದಾಗಿದ್ದ ಕಾರಣದಿಂದ ಅಪಘಾತಗಳ ತಾಣವಾಗಿ ಪರಿವರ್ತಿತವಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಬೇಕು. ರಸ್ತೆ ಅಗಲೀಕರಣಕ್ಕೆ ಕ್ರಮಕೈಗೊಳ್ಳಬೇಕು ಎಂಬುವುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿತ್ತು.
ಈ ಸಂಬಂಧ ಹಲವು ವರ್ಷಗಳಿಂದ ನಿವಾಸಿಗಳು ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆಯ ಗಮನ ಸೆಳೆಯುವ ಕೆಲಸ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ ನಿವೃತ್ತಗೊಂಡ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಬಿ.ಎಸ್.ಬಾಲಕೃಷ್ಣರವರು ನಿವಾಸಿಗಳ ಬೇಡಿಕೆಗೆ ಸ್ಪಂದಿಸಿ ಕಳೆದ ವರ್ಷ ಖುದ್ದು ಸ್ಥಳಕ್ಕೆ ಭೇಟಿಯಿತ್ತು ಸೇತುವೆಯ ಸ್ಥಿತಿಗತಿ ಪರಿಶೀಲಿಸಿದ್ದರು. ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡು, ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆಯ ವಿಶೇಷ ವಿಭಾಗದ ಎಂಜಿನಿಯರ್‍ಗಳಿಗೆ ಸೂಚನೆ ನೀಡಿದ್ದರು.
ಅವರ ಪ್ರಯತ್ನದ ಫಲವಾಗಿ ನಬಾರ್ಡ್‍ನಿಂದ ಹೊಸ ಸೇತುವೆ ನಿರ್ಮಾಣಕ್ಕೆ ಅನುಮತಿ ದೊರೆತು, 1 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಇತ್ತೀಚೆಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ಕಳೆದ ಒಂದು ತಿಂಗಳಿನಿಂದ ಹಳೇ ಸೇತುವೆ ನೆಲಸಮಗೊಳಿಸಿ, ಹೊಸ ಸೇತುವೆ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿತ್ತು.







