ಮೂರನೇ ಟೆಸ್ಟ್: ಶ್ರೀಲಂಕಾ 356/9
ನಾಯಕ ದಿನೇಶ್ ಚಾಂಡಿಮಲ್,ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಶತಕ

ಹೊಸದಿಲ್ಲಿ, ಡಿ.4: ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡ ನಾಯಕ ದಿನೇಶ್ ಚಾಂಡಿಮಲ್ ಮತ್ತು ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಶತಕದ ನೆರವಿನಲ್ಲಿ ಸೋಮವಾರ ಮೂರನೇ ದಿನದಾಟದಂತ್ಯಕ್ಕೆ 130 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 356 ರನ್ ಗಳಿಸಿದೆ.
ನಾಯಕ ದಿನೇಶ್ ಚಾಂಡಿಮಲ್ ಔಟಾಗದೆ 147 ರನ್ (341ಎ, 18ಬೌ,1ಸಿ) ಮತ್ತು ಇನ್ನೂ ಖಾತೆ ತೆರೆಯದ ಸಂಡಕನ್ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
ಭಾರತದ ಸವಾಲನ್ನು ಸರಿಗಟ್ಟಲು ಶ್ರೀಲಂಕಾ ಇನ್ನೂ 180 ರನ್ ಗಳಿಸಬೇಕಾಗಿದೆ. ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 127.5 ಓವರ್‌ಗಳಲ್ಲಿ 7ವಿಕೆಟ್ ನಷ್ಟದಲ್ಲಿ 536ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ಇಂದು ನಾಯಕ ಚಾಂಡಿಮಲ್ 265 ಎಸೆತಗಳಲ್ಲಿ 13 ಬೌಂಡರಿಗಳ ಸಹಾಯದಿಂದ ಶತಕ ದಾಖಲಿಸಿದರು. ಮ್ಯಾಥ್ಯೂಸ್ ಅವರು 231 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು.
ಮ್ಯಾಥ್ಯೂಸ್ 72ನೇ ಟೆಸ್ಟ್‌ನಲ್ಲಿ 8ನೇ ಶತಕ ಮತ್ತು ನಾಯಕ ಚಾಂಡಿಮಲ್ 44ನೇ ಟೆಸ್ಟ್‌ನಲ್ಲಿ 10ನೇ ಶತಕ ದಾಖಲಿಸಿದರು.
ಮಾಥ್ಯೂಸ್ 111ರನ್ (268ಎ, 14ಬೌ,2ಸಿ) ಗಳಿಸಿ ಔಟಾದರು.
ಎರಡನೆ ದಿನದಾಟದಂತ್ಯಕ್ಕೆ ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 44.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 131 ರನ್ ಗಳಿಸಿತ್ತು. 57 ರನ್ ಗಳಿಸಿರುವ ಆ್ಯಂಜೆಲೊ ಮ್ಯಾಥ್ಯೂಸ್ ಮತ್ತು 25 ರನ್ ಗಳಿಸಿರುವ ನಾಯಕ ದಿನೇಶ್ ಚಾಂಡಿಮಲ್ ಔಟಾಗದೆ ಕ್ರೀಸ್‌ನಲ್ಲಿದ್ದರು. ಇವರು ಬ್ಯಾಟಿಂಗ್ ಮುಂದುವರಿಸಿ ಭಾರತದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು.4ನೇ ವಿಕೆಟ್‌ಗೆ 181 ರನ್‌ಗಳ ಜೊತೆಯಾಟ ನೀಡಿದರು.
ಮ್ಯಾಥ್ಯೂಸ್ ಔಟಾದ ಬಳಿಕ ಚಾಂಡಿಮಲ್ ಮತ್ತು ಸಮರವಿಕ್ರಮ 5ನೇ ವಿಕೆಟ್‌ಗೆ 61 ರನ್ ಸೇರಿಸಿದರು.
ಸಮರವಿಕ್ರಮ ಔಟಾದ ಬಳಿಕ 26 ರನ್‌ಗಳಿಗೆ ಲಂಕಾದ 4 ವಿಕೆಟ್‌ಗಳು ಪತನಗೊಂಡಿತು.
ಭಾರತದ ಪರ ಆರ್.ಅಶ್ವಿನ್ 90ಕ್ಕೆ 3 ವಿಕೆಟ್, ಮುಹಮ್ಮದ್ ಶಮಿ, ಇಶಾಂತ್ ಶರ್ಮ ಮತ್ತು ರವೀಂದ್ರ ಜಡೇಜ ತಲಾ 2 ವಿಕೆಟ್ ಪಡೆದರು.







