ಕೂಡ್ಲು ಸೇವಾ ಸಹಕಾರಿ ಬ್ಯಾಂಕಿಗೆ ಗ್ರಾಹಕರ ಮುತ್ತಿಗೆ, ದಿಗ್ಬಂಧನ
ಅಡವಿಟ್ಟ ಚಿನ್ನಾಭರಣಗಳನ್ನು ಮರಳಿಸಲು ಆಗ್ರಹ
.gif)
ಕಾಸರಗೋಡು, ಡಿ.4: ಅಡವಿಟ್ಟ ಚಿನ್ನಾಭರಣಗಳನ್ನು ಮರಳಿ ನೀಡುವಂತೆ ನಗರ ಹೊರವಲಯದ ಕೂಡ್ಲು ಸೇವಾ ಸಹಕಾರಿ ಬ್ಯಾಂಕಿಗೆ ಗ್ರಾಹಕರು ಸೋಮವಾರ ಬೆಳಗ್ಗೆ ದಿಗ್ಬಂಧನ ಹಾಕಿದರು. ಮಹಿಳೆಯರು ಸೇರಿದಂತೆ ನೂರಕ್ಕೂ ಅಧಿಕ ಗ್ರಾಹಕರು ಬ್ಯಾಂಕಿಗೆ ಮುತ್ತಿಗೆ ಹಾಕಿ ಸಿಬ್ಬಂದಿಯನ್ನು ದಿಗ್ಬಂಧನದಲ್ಲಿರಿಸಿದ್ದರು. ಮಾಹಿತಿ ತಿಳಿದು ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಬಳಿಕ ಮಾತುಕತೆ ನಡೆಸಿ ಸಹಮತಕ್ಕೆ ಬರಲಾಗಿದ್ದು, ಎರಡು ದಿನಗಳೊಳಗೆ ಸಮಸ್ಯೆಯನ್ನು ಪರಿಹರಿಸುವುದಾಗಿ ಬ್ಯಾಂಕಿನವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮಧ್ಯಾಹ್ನದ ವೇಳೆಗೆ ಹಿಂದೆಗೆದುಕೊಳ್ಳಲಾಯಿತು.
2001 ಮತ್ತು 2015ರಲ್ಲಿ ಎರಡು ಬಾರಿ ಕೋಟ್ಯoತರ ರೂ. ಮೌಲ್ಯದ ಚಿನ್ನಾಭರಣ ಈ ಬ್ಯಾಂಕ್ ನಿಂದ ದರೋಡೆಗೊಳಗಾಗಿತ್ತು.
2001ರಲ್ಲಿ ನಡೆದ ದರೋಡೆ ಬಳಿಕ 153 ಗ್ರಾಹಕರು, 2015ರಲ್ಲಿ ನಡೆದ ದರೋಡೆ ಬಳಿಕ 880 ಮಂದಿಗೆ ಅಡವಿಟ್ಟ ಚಿನ್ನಾಭರಣ ಮರಳಿಸಲು ಸಾಧ್ಯವಾಗಿಲ್ಲ ಎಂದು ಗ್ರಾಹಕರು ದೂರಿದ್ದಾರೆ.
ಅಡವಿಟ್ಟ ಚಿನ್ನಾಭರಣವನ್ನು ಅಕ್ಟೊಬರ್ 30ರೊಳಗೆ ಮರಳಿಸುವುದಾಗಿ ಬ್ಯಾಂಕ್ ಅಧಿಕಾರಿಗಳು ಈ ಹಿಂದೆ ಭರವಸೆ ನೀಡಿದ್ದರು. ಆದರೆ ಇದುವರೆಗೆ ಚಿನ್ನಾಭರಣ ಮರಳಿಸಲು ಮುಂದಾಗದಿರುವುದನ್ನು ಪ್ರತಿಭಟಿಸಿ ಗ್ರಾಹಕರು ಬ್ಯಾಂಕಿಗೆ ದಿಗ್ಬಂಧನ ಹಾಕಿದ್ದಾರೆ.
ದರೋಡೆಗೊಳಗಾದ ಬಹುತೇಕ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಕಾನೂನು ಹೋರಾಟ ನಡೆಯುತ್ತಿರುವುದರಿಂದ ಚಿನ್ನಾಭರಣ ಗ್ರಾಹಕರಿಗೆ ಮರಳಿಸುವಲ್ಲಿ ಗೊಂದಲ ಉಂಟಾಗಿದೆ ಎನ್ನಲಾಗುತ್ತಿದೆ.







