ಚಿಕ್ಕಮಗಳೂರಿನಲ್ಲಿ ದುಷ್ಕರ್ಮಿಗಳಿಂದ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಎಸೆತ : ಎಸ್ಪಿ ಅಣ್ಣಾಮಲೈ
13 ಮಂದಿ ವಶಕ್ಕೆ

ಚಿಕ್ಕಮಗಳೂರು, ಡಿ.4: ದತ್ತಜಯಂತಿಯ ಕೊನೆಯ ದಿನವಾದ ರವಿವಾರ ರಾತ್ರಿ ಗಸ್ತು ತಿರುಗುತ್ತಿದ್ದಾಗ ನಗರದಲ್ಲಿ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಪ್ರಯೋಗ ಮಾಡಲಾಗಿದೆ ಎಂದು ಎಸ್ಪಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.
ಅವರು ಸೋಮವಾರ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಗರದ ತಮಿಳು ಕಾಲನಿಯ ಬಳಿ ಮಾರ್ಕೆಟ್ ರಸ್ತೆಯಲ್ಲಿ ಪೊಲೀಸರು ರಾತ್ರಿ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಕಿಡಿಗೇಡಿಗಳು ಒಂದು ಪೆಟ್ರೋಲ್ ಬಾಂಬ್ ಪ್ರಯೋಗ ಮಾಡಿದ್ದಾರೆ. ಸಾರಾಯಿ ಬಾಟಲ್‍ನಲ್ಲಿ ಪೆಟ್ರೋಲ್ ನೊಂದಿಗೆ ಬಟ್ಟೆ ಸುತ್ತಿ ತಯಾರಿಸಿದ್ದ ಪೆಟ್ರೋಲ್ ಬಾಂಬ್ ಇದಾಗಿದೆ ಎಂದವರು ಹೇಳಿದರು.
ಈ ಸಮಯದಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಸುಮಾರು ಐದು ಪೆಟ್ರೋಲ್ ಬಾಂಬ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕೃತ್ಯವನ್ನು ಕೇವಲ 15 ರಿಂದ 18 ವಯಸ್ಸಿನ ಹುಡುಗರು ನಡೆಸಿದ್ದಾರೆ. ಈ ಘಟನೆ ಸಂಬಂಧ 9 ಮಂದಿ ಯುವಕರು, 4 ಮಂದಿ ಅಪ್ರಾಪ್ತರ ಸಹಿತ ಒಟ್ಟು 13 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಪೆಟ್ರೋಲ್ ಬಾಂಬ್‍ಗಳು ರಷ್ಯಾ ದೇಶದಲ್ಲಿ ಬಳಸುವ ಮಾದರಿಯಲ್ಲಿದೆ. ಸದ್ಯ ಇಂತಹ ಪೆಟ್ರೋಲ್ ಬಾಂಬ್‍ಗಳನ್ನು ಕೇರಳ ಹಾಗೂ ತಮಿಳುನಾಡಿನಲ್ಲಿ ಹೆಚ್ಚಾಗಿ ಬಳಸಲ್ಪಡುತ್ತಿರುವ ಮಾಹಿತಿಗಳಿವೆ ಎಂದರು.
ದತ್ತ ಜಯಂತಿ ಆಚರಣೆ ವೇಳೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ 32 ಜನರನ್ನು ವಶಕ್ಕೆ ಪಡೆಯಲಾಗಿದ್ದು, ನಾಲ್ಕು ಪ್ರಕರಣ ದಾಖಲು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಂಸದ ಪ್ರತಾಪ್ ಸಿಂಹ ಟ್ವೀಟ್ ಗೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಣ್ಣಾಮಲೈ, ನಾವು ಎರಡು ಧರ್ಮದವರಿಗೂ ಸಮನಾದ ಭದ್ರತೆ ನೀಡುತ್ತೇವೆ. ರಾಜಕಾರಣಿಗಳು ಪ್ರತಿಕ್ರಿಯೆ ನೀಡುವುದು ಸಾಮಾನ್ಯ. ಕೆಲಸ ಮಾಡುವುದೇ ನಮ್ಮ ಬದ್ಧತೆ. ಕಾನೂನು ಎಲ್ಲರಿಗೂ ಒಂದೇ. ಅದರಲ್ಲಿ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.







