ಮಹಿಳೆಗೆ ಓಮ್ನಿ ಢಿಕ್ಕಿ: ಚಾಲಕನಿಗೆ ಹಲ್ಲೆ; ಆರೋಪ- ನಾಲ್ಕು ಮಂದಿ ಸೆರೆ

ಪುತ್ತೂರು, ಡಿ.4: ಮಹಿಳೆಯೊಬ್ಬರಿಗೆ ಓಮ್ನಿ ಕಾರು ಢಿಕ್ಕಿ ಹೊಡೆಯಿತೆಂಬ ಕಾರಣಕ್ಕೆ ತಂಡವೊಂದು ಚಾಲಕನಿಗೆ ಹಲ್ಲೆ ನಡೆಸಿ, ಕಾರಿಗೆ ಹಾನಿ ಉಂಟು ಮಾಡಿರುವ ಬಗ್ಗೆ ಸಂಪ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ, ಪ್ರಸ್ತುತ ಸಂಪ್ಯ ಸಮೀಪದ ಬಾರಿಕೆಯಲ್ಲಿ ವಾಸ್ತವ್ಯವಿರುವ ಚಂದ್ರಶೇಖರ್ (28) ಹಲ್ಲೆಗೊಳಗಾದ ಓಮ್ನಿ ಚಾಲಕ. ಚಂದ್ರಶೇಖರ್ ಶನಿವಾರ ರಾತ್ರಿ ಓಮ್ನಿಯಲ್ಲಿ ಸಂಪ್ಯ ಕಡೆಗೆ ತೆಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಶನಿವಾರ ರಾತ್ರಿ 10:30ರ ವೇಳೆ ತಾನು ಪುತ್ತೂರಿನಿಂದ ಸಂಪ್ಯ ಕಡೆಗೆ ಓಮ್ನಿಯಲ್ಲಿ ಬರುತ್ತಿದ್ದ ವೇಳೆ ಸಂಪ್ಯ ಮಸೀದಿ ಸಮೀಪ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಪೈಕಿ ವೃದ್ಧೆಯೊಬ್ಬರು ಅಡ್ಡ ಬಂದ ಕಾರಣ ಕಾರು ಢಿಕ್ಕಿ ಹೊಡೆದಿತ್ತು. ಇದರಿಂದ ರಸ್ತೆಗೆ ಬಿದ್ದ ಮಹಿಳೆಯನ್ನು ಎಬ್ಬಿಸಿ, ವಿಚಾರಿಸುತ್ತಿದ್ದಂತೆಯೇ ಏಕಾಏಕಿಯಾಗಿ ಯುವಕರ ತಂಡವೊಂದು ತನ್ನ ಮೇಲೆ ಹಲ್ಲೆ ನಡೆಸಿ, ಓಮ್ನಿಗೆ ಹಾನಿ ಉಂಟು ಮಾಡಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ. ಹಲ್ಲೆ ತಂಡದಲ್ಲಿ ಸ್ಥಳೀಯ ನಿವಾಸಿಗಳಾದ ಫಾರೂಕ್, ಅಬೀಬ್, ಅಶ್ರಫ್ ಅಲಿ ಮತ್ತಿತರಿದ್ದರು ಎಂದು ಚಂದ್ರಶೇಖರ್ ಅವರ ಸಹೋದರ ಸಂಪ್ಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆ ಪ್ರಕರಣ: ನಾಲ್ಕು ಮಂದಿ ಸೆರೆ
ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ. ಸಂಪ್ಯ ನಿವಾಸಿಗಳಾದ ಫಾರೂಕ್, ಹಬೀಬ್, ನೌಫಲ್ ಮತ್ತು ಅಶ್ರಫ್ ಅಲಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಚಂದ್ರಶೇಖರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು , ಗಾಯಾಳು ಖತೀಜಮ್ಮ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.







