ಹುಣಸೂರಿನಲ್ಲಿ ನಡೆದ ಗಲಭೆಗೆ ಸಂಸದ ಪ್ರತಾಪ್ ಸಿಂಹ ನೇರ ಹೊಣೆ: ಗೃಹ ಸಚಿವ ರಾಮಲಿಂಗಾರೆಡ್ಡಿ
"ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಮುಖಂಡರು ಸಂಗ್ರಹಿಸಿದ ಇಟ್ಟಿಗೆಗಳೆಲ್ಲಿ?"

ಬೆಂಗಳೂರು, ಡಿ. 4: ಶ್ರೀರಾಮ, ಹನುಮ, ದತ್ತ ಜಯಂತಿ ಹೆಸರಿನಲ್ಲಿ ಬಿಜೆಪಿ ಮುಖಂಡರು, ಭಕ್ತಿಗಿಂತ ರಾಜಕೀಯ ಮಾಡುವ ಮೂಲಕ ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಕೆಲಸಲ್ಲಿ ತೊಡಗಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಸೋಮವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಮ, ಹನುಮ, ದತ್ತನ ಬಗ್ಗೆ ಬಿಜೆಪಿಯವರಿಗಿಂತ ಕಾಂಗ್ರೆಸ್ಸಿಗರಿಗೆ ಹೆಚ್ಚಿನ ಭಕ್ತಿ ಇದೆ. ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಇಟ್ಟಿಗೆ ಎಲ್ಲಿ: ದೇಶದಲ್ಲಿ ರಾಮಮಂದಿರದ ಹೆಸರಿನಲ್ಲಿ ಇಟ್ಟಿಗೆ ಸಂಗ್ರಹಿಸಿದ್ದ ಬಿಜೆಪಿ ಮುಖಂಡರು ಆ ಇಟ್ಟಿಗೆಗಳನ್ನು ಎಲ್ಲಿ ಇಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಕೇಂದ್ರದಲ್ಲಿ ಹಾಗೂ ಉತ್ತರಪ್ರದೇಶದಲ್ಲಿ ಬಿಜೆಪಿಯದ್ದೇ ಅಧಿಕಾರವಿದೆ. ಮಂದಿರ ಕಟ್ಟಲು ಅವರನ್ನು ತಡೆಹಿಡಿದವರು ಯಾರು ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡರಿಗೆ ಮಂದಿರ ನಿರ್ಮಿಸುವ ಇರಾದೆ ಇಲ್ಲ. ಬದಲಿಗೆ ಆ ಹೆಸರಿನಲ್ಲಿ ರಾಜಕೀಯಕ್ಕಾಗಿ ಇನ್ನೂ ಮೂವತ್ತು, ನಲವತ್ತು ವರ್ಷಗಳ ಕಾಲ ಬಿಜೆಪಿ ಪಕ್ಷ ರಾಮಮಂದಿರವನ್ನು ಕಟ್ಟುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಇದೇ ವೇಳೆ ಲೇವಡಿ ಮಾಡಿದರು.
ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಲೇ ಕಾನೂನು ಗಾಳಿಗೆ ತೂರುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿಲ್ಲ ಎಂದ ಅವರು, ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕ ಮುಖಂಡರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಇವರಿಗೆ ಕಾನೂನು ಅರಿವಿನ ಕಾರ್ಯಾಗಾರ ಹಮ್ಮಿಕೊಳ್ಳುವುದು ಒಳಿತು ಎಂದು ಹೇಳಿದರು.
ಕಾನೂನಿನ ಮುಂದೆ ಬಿಜೆಪಿಯ ನಾಯಕರುಗಳಿರಲಿ, ತಾನಿರಲಿ ಅಥವಾ ಸಾಮಾನ್ಯ ಜನರೇ ಇರಲಿ ಎಲ್ಲರೂ ಒಂದೇ. ಕಾನೂನು ಕೈಗೆತ್ತಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಹುಣಸೂರಿನಲ್ಲಿ ನಡೆದ ಗಲಭೆಗೆ ಸಂಸದ ಪ್ರತಾಪ್ ಸಿಂಹ ನೇರ ಹೊಣೆ. ಜನಪ್ರತಿನಿಧಿಯಾಗಿದ್ದು, ಕನಿಷ್ಟ ಕಾನೂನನ್ನು ಗೌರವಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಪೊಲೀಸರು ನೀಡಿದ್ದ ಮಾರ್ಗಸೂಚಿಯನ್ನು ಬದಿಗಿರಿಸಿ ಕಾನೂನು ಉಲ್ಲಂಘಿಸಲು ಮುಂದಾಗಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಬೆಂಗಳೂರು ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಪರಾಧ ಪ್ರಕರಣಗಳು ಇಳಿಕೆಯಾಗಿವೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹೆಚ್ಚಾಗುತ್ತಿದ್ದು, ಅವುಗಳನ್ನೆ ಅಪರಾಧ ಪ್ರಕರಣ ಎಂದು ಬಿಂಬಿಸುವುದು ಸರಿಯಲ್ಲ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.
‘ಬಿಜೆಪಿ ನಾಯಕರು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆಂದು ಹಗಲುಗನಸು ಕಾಣುತ್ತಿದ್ದಾರೆ. ಅದು ಯಾವುದೇ ಕಾರಣಕ್ಕೂ ಸಫಲ ಆಗುವುದಿಲ್ಲ. ಬಿಜೆಪಿ ನಾಯಕರು ಏನೆಂದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ’
-ರಾಮಲಿಂಗಾರೆಡ್ಡಿ ಗೃಹ ಸಚಿವ







