ಪೌರಾಯುಕ್ತೆಯ ವಿರುದ್ಧ ಅಧ್ಯಕ್ಷೆ ನೀಡಿದ ದೂರು ವಜಾಗೊಳಿಸಿದ ಲೋಕಾಯುಕ್ತ
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಹವಾಲು ಸ್ವೀಕಾರ
ಮಂಗಳೂರು, ಡಿ.4: ಪುತ್ತೂರು ನಗರಸಭೆಯ ಪೌರಾಯುಕ್ತೆ ರೂಪಾ ಟಿ. ವಿರುದ್ಧ ಅಧ್ಯಕ್ಷೆ ಜಯಂತಿ ಬಲ್ನಾಡ್ ನೀಡಿದ್ದ 5 ದೂರು ಅರ್ಜಿಗಳನ್ನು ಲೋಕಾಯುಕ್ತ ನ್ಯಾಯಾಧೀಶ ಪಿ.ವಿಶ್ವನಾಥ ಶೆಟ್ಟಿ ಅವರು ವಜಾಗೊಳಿಸಿದ ಘಟನೆ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ನಡೆಯಿತು.
ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ನೀಡುವ ತೊಂದರೆ, ಕಿರುಕುಳದ ವಿರುದ್ಧ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಈ ಅಹವಾಲು ಕಾರ್ಯಕ್ರಮ ಆಯೋಜಿಸಲಾಗಿದೆಯೇ ವಿನ: ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ದೂರು ನೀಡಲು ಅಲ್ಲ ಎಂದ ಲೋಕಾಯುಕ್ತರು ದೂರು ನೀಡಿದರೂ ವಿಚಾರಣೆಗೆ ಗೈರು ಹಾಜರಾದ ಅಧ್ಯಕ್ಷೆಯ ಕಾರ್ಯವೈಖರಿಯನ್ನೂ ಪ್ರಶ್ನಿಸಿದರು. ಅಲ್ಲದೆ ಅಧ್ಯಕ್ಷೆಯ ಪರವಾಗಿ ವಕಾಲತ್ತು ಮಾಡಲು ಹಾಜರಾದ ವಕೀಲರನ್ನು ತರಾಟೆಗೆ ತೆಗೆದುಕೊಂಡರು.
ದೂರು ನೀಡಿದ ಮೇಲೆ ಹಾಜರಿರಬೇಕು ಎಂದು ಅಧ್ಯಕ್ಷರಿಗೆ ಗೊತ್ತಿರಲಿಲ್ಲವೇ? ದೂರು ನೀಡಿದ ಬಳಿಕ ನಿಮ್ಮನ್ನು (ವಕೀಲರು) ಕಳುಹಿಸಿದ್ದು ಸರಿಯೇ? ಅವರಿಗೆ ಬರಲು ಅಸಾಧ್ಯ ಎಂದಾದ ಮೇಲೆ ಅವರ ಪರವಾಗಿ ವಿಚಾರಣೆಗೆ ಬರಲು ಇತರ ಕೌನ್ಸಿಲರ್‌ಗಳಿರಲಿಲ್ಲವೇ? ಅಧಿಕಾರಿಗಳು, ಸಿಬ್ಬಂದಿ ವರ್ಗದಿಂದ ಕೆಲಸ ಮಾಡಿಸುವುದು ಅಧ್ಯಕ್ಷರ ಕೆಲಸ. ಅವರಿಂದ ಅದು ಸಾಧ್ಯ ಇಲ್ಲ ಎಂದಾದ ಮೇಲೆ ಅವರು ಆ ಸ್ಥಾನದಲ್ಲಿ ಕೂರಲು ಅಸಮರ್ಥರು ಎಂದು ಪರಿಗಣಿಸಬೇಕಿದೆ ಎಂದ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಹೇಳಿದರು.
ಪೌರಾಯುಕ್ತರು ಸಮರ್ಪಕವಾಗಿ ಕೆಲಸ ಮಾಡದಿದ್ದರೆ ಕೌನ್ಸಿಲ್‌ನಲ್ಲಿ ನಿರ್ಣಯಕೈಗೊಂಡು ಮೇಲಧಿಕಾರಿಗೆ ದೂರು ಸಲ್ಲಿಸಬಹುದಿತ್ತು. ಅದು ಬಿಟ್ಟು, ನೇರ ಲೋಕಾಯುಕ್ತಕ್ಕೆ ದೂರು ನೀಡಿರುವುದು ಎಷ್ಟು ಸರಿ? ಅದೂ ದೂರಿಗೆ ಅಫಿದಾವಿತ್ ಕೂಡ ಇಲ್ಲ. ಹಳ್ಳಿ ರಾಜಕೀಯ ಏನು ಅಂತ ನನಗೆ ಚೆನ್ನಾಗಿ ಗೊತ್ತು. ಹೀಗೆ ಮುಂದುವರಿದರೆ ನಾಳೆ ಜಿಪಂ ಅಧ್ಯಕ್ಷರು ಕೂಡ ಜಿಲ್ಲಾಧಿಕಾರಿ, ಜಿಪಂ ಸಿಇಒ ವಿರುದ್ಧ ದೂರು ನೀಡಬಹುದು ಎಂದು ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟರು.
ರಾಜೀವ್‌ಗಾಂಧಿ ವಸತಿ ನಿಗಮದ ಸಹಾಯ ಧನ ಪಡೆದು ತಾನು ಮನೆ ನಿರ್ಮಿಸಲು ಮುಂದಾಗಿದ್ದೇನೆ. ಆದರೆ ಹಣ ಬಿಡುಗಡೆಗೆ ಪಡುವನ್ನೂರು ಗ್ರಾಮದ ಪಿಡಿಒ 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ತನ್ನಲ್ಲಿ ದಾಖಲೆ ಕೂಡ ಇದೆ ಎಂದು ಈಶ್ವರಮಂಗಿಲದ ದಿನೇಶ್ ಕೆ. ಎಂಬವರ ದೂರು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಲೋಕಾಯುಕ್ತರು ದೂರುದಾರ ಮತ್ತು ಪಿಡಿಒ ಅವರ ಹೇಳಿಕೆ ದಾಖಲಿಸಿಕೊಂಡರು.
ಅಂತಿಮವಾಗಿ ತೀರ್ಪು ನೀಡಿದ ಲೋಕಾಯುಕ್ತರು ಲೋಕಾಯುಕ್ತ ಇಂಜಿನಿಯರ್‌ರಿಂದ ಸ್ಥಳ ತನಿಖೆ ನಡೆಸಲಾಗುವುದು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಜಿಪಂ ಸಿಇಒ ಕೂಡ ತನಿಖೆ ನಡೆಸಿ ವರದಿ ಸಲ್ಲಿಸಬೇಕು. ನಿಗಮವು ಜ.10ರೊಳಗೆ ಹಣ ಬಿಡುಗಡೆಗೊಳಿಸಲು ನಿರ್ದೇಶನ ನೀಡಲಾಗುವುದು ಎಂದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಪಂ ಸಿಇಒ ಡಾ. ಎಂ.ಆರ್.ರವಿ, ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಉಪಸ್ಥಿತರಿದ್ದರು.







